ನರೇಗಾ ಕ್ರಿಯಾ ಯೋಜನೆಗೆ ಅರ್ಜಿ ಸಲ್ಲಿಸಲು ನಾಳೆ ಕೊನೆ ದಿನ

ಗ್ರಾಮೀಣ ಪ್ರದೇಶಗಳ ಬಡ ಕುಟುಂಬಗಳ ಆರ್ಥಿಕ ಭದ್ರತೆ ಹಾಗೂ ಸ್ಥಳೀಯ ಮೂಲಸೌಕರ್ಯ ಅಭಿವೃದ್ಧಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಆಧಾರಸ್ತಂಭವಾಗಿದೆ. ಪ್ರಸ್ತುತ, 2025-26ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ನರೇಗಾ ಕ್ರಿಯಾ ಯೋಜನೆ (Action Plan) ತಯಾರಿಗೆ ಅರ್ಜಿ ಸಲ್ಲಿಸಲು ನಾಳೆ, ಅಂದರೆ ನವೆಂಬರ್ 20 ಕೊನೆಯ ದಿನಾಂಕವಾಗಿದೆ.
ಗ್ರಾಮೀಣ ಕುಟುಂಬಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು, ತಮ್ಮ ಗ್ರಾಮ ಪಂಚಾಯತಿಗಳಲ್ಲಿ ಬೇಡಿಕೆ ಸಲ್ಲಿಸುವ ಮೂಲಕ ತಮ್ಮ ವೈಯಕ್ತಿಕ ಮತ್ತು ಸಾರ್ವಜನಿಕ ಕಾಮಗಾರಿಗಳನ್ನು ಮುಂಬರುವ ಕ್ರಿಯಾ ಯೋಜನೆಯಲ್ಲಿ ಸೇರಿಸಲು ಮನವಿ ಮಾಡಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 20, 2025.
ನರೆಗಾ ಯೋಜನೆಯಡಿ ಯಾವ ರೀತಿಯ ಮತ್ತು ಎಷ್ಟು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂಬುದನ್ನು ಕ್ರಿಯಾ ಯೋಜನೆಯಲ್ಲಿ ನಿರ್ಧರಿಸಲಾಗುತ್ತದೆ. ಜನರು ತಮ್ಮ ವೈಯಕ್ತಿಕ ಭೂಮಿಯಲ್ಲಿನ ಕೆಲಸಗಳು (ಕೃಷಿ ಹೊಂಡ, ಕೊಟ್ಟಿಗೆ, ಇತ್ಯಾದಿ) ಮತ್ತು ಸಾರ್ವಜನಿಕ ಕಾಮಗಾರಿಗಳ (ರಸ್ತೆ, ಕಾಲುವೆ, ಇತ್ಯಾದಿ) ಬೇಡಿಕೆಗಳನ್ನು ಈ ದಿನಾಂಕದೊಳಗೆ ಸಲ್ಲಿಸುವುದು ಕಡ್ಡಾಯ.
ಯಾರು ಅರ್ಜಿ ಸಲ್ಲಿಸಬಹುದು?
ಭಾರತೀಯ ನಾಗರಿಕರು.
18 ವರ್ಷಕ್ಕಿಂತ ಮೇಲ್ಪಟ್ಟವರು.
ಗ್ರಾಮೀಣ ಪ್ರದೇಶದ ನಿವಾಸಿಗಳು.
ಅಕುಶಲ (ಕೌಶಲ್ಯರಹಿತ) ಕಾರ್ಮಿಕರಾಗಿ ಕೆಲಸ ಮಾಡಲು ಸಿದ್ಧರಿರುವವರು.
ನರೇಗಾ ಜಾಬ್ ಕಾರ್ಡ್ ಹೊಂದಿರುವವರು ಅಥವಾ ಹೊಸದಾಗಿ ಜಾಬ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರು.
ಇದನ್ನೂ ಓದಿ: ನಾಳೆಯೇ ಖಾತೆಗೆ ಬರುತ್ತೆ 7 ಸಾವಿರ; ಮೊದಿ ಯೋಜನೆ ಹೊಸ ನೆರವು
ಅರ್ಜಿ ಸಲ್ಲಿಸುವುದು ಹೇಗೆ?
ಗ್ರಾಮ ಪಂಚಾಯತಿ ಭೇಟಿ: ಮೊದಲಿಗೆ, ನಿಮ್ಮ ಸ್ಥಳೀಯ ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿ.
ಬೇಡಿಕೆ ನಮೂನೆ: 2025-26ನೇ ಸಾಲಿನ ಕ್ರಿಯಾ ಯೋಜನೆಗಾಗಿ ಕಾಮಗಾರಿ ಬೇಡಿಕೆ/ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ.
ಮಾಹಿತಿ ಭರ್ತಿ ಮಾಡಿ: ನಿಮ್ಮ ವೈಯಕ್ತಿಕ ವಿವರಗಳು, ನರೇಗಾ ಜಾಬ್ ಕಾರ್ಡ್ ಸಂಖ್ಯೆ, ಹಾಗೂ ನೀವು ಬೇಡಿಕೆ ಸಲ್ಲಿಸುತ್ತಿರುವ ವೈಯಕ್ತಿಕ ಅಥವಾ ಸಾರ್ವಜನಿಕ ಕಾಮಗಾರಿಯ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿ.
ದಾಖಲೆಗಳ ಸಲ್ಲಿಕೆ: ಜಾತಿ ಪ್ರಮಾಣ ಪತ್ರ (ಅನ್ವಯಿಸಿದಲ್ಲಿ), ಆರ್‌ಟಿಸಿ (ಕೃಷಿ ಭೂಮಿಗೆ ಸಂಬಂಧಿಸಿದ ಕಾಮಗಾರಿಯಾಗಿದ್ದರೆ), ಹಕ್ಕುಪತ್ರ (ಇದ್ದಲ್ಲಿ) ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ.
ಸಲ್ಲಿಕೆ: ಭರ್ತಿ ಮಾಡಿದ ಅರ್ಜಿಯನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅಥವಾ ಸಂಬಂಧಪಟ್ಟ ಅಧಿಕಾರಿಗೆ ಸಲ್ಲಿಸಿ.



