ಮಂಗಳವಾರ, ಏಪ್ರಿಲ್ 29, 2025
Homeeducationಅಗಸ್ಟ್ 20ಕ್ಕೆ ಸಿಇಟಿ ಫಲಿತಾಂಶ ಪ್ರಕಟ : ಸಚಿವ ಅಶ್ವಥ್ ನಾರಾಯಣ್

ಅಗಸ್ಟ್ 20ಕ್ಕೆ ಸಿಇಟಿ ಫಲಿತಾಂಶ ಪ್ರಕಟ : ಸಚಿವ ಅಶ್ವಥ್ ನಾರಾಯಣ್

- Advertisement -

ಬೆಂಗಳೂರು : ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಅಗಸ್ಟ್ 20ರಂದು ಪ್ರಕಟವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವವರಾಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಎಂಜಿನಿಯರಿಂಗ್‌ ಸೀಟುಗಳ ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಕಾಮೆಡ್‌-ಕೆ, ಕರ್ನಾಟಕ ಅನುದಾನ ರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಘ ಹಾಗೂ ರಾಜ್ಯ ಮತೀಯ ಅಲ್ಪಸಂಖ್ಯಾತ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸಂಘದ ಪ್ರತಿನಿಧಿಗಳ ಸಭೆ ನಡೆಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಕೋವಿಡ್‌ ಮತ್ತು ನೆರೆ ಕಾರಣಕ್ಕೆ ಶುಲ್ಕ ಹೆಚ್ಚಳ ಮಾಡುತ್ತಿಲ್ಲ. ಜತೆಗೆ ಕಳೆದ ವರ್ಷದ ಸೀಟು ಹಂಚಿಕೆ ಪ್ರಮಾಣದಲ್ಲಿಯೇ ಈ ವರ್ಷ ಕೂಡ ಸೀಟು ಹಂಚಿಕೆ ಮಾಡುತ್ತಿದ್ದು, ಇದಕ್ಕೆ ಎಲ್ಲ ಸಂಘಗಳ ಪ್ರತಿನಿಧಿಗಳೂ ಒಪ್ಪಿಗೆ ಸೂಚಿಸಿದರು ಎಂದು ಅವರು ತಿಳಿಸಿದರು.

ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಈ ವರ್ಷ ಯಾವುದೇ ಬೇಡಿಕೆಯನ್ನು ಮುಂದಿಟ್ಟಿಲ್ಲ. ಸರಕಾರದ ಪ್ರಸ್ತಾವನೆಯನ್ನೇ ಒಪ್ಪಿಕೊಂಡಿವೆ. ಶೇಕಡಾ 45:30:25ರ ಅನುಪಾತದ ಸೀಟು ಹಂಚಿಕೆಗೆ ಒಪ್ಪಿಗೆ ಸೂಚಿಸಲಾಗಿದೆ. ಇದರಲ್ಲಿ ಶೇ 45 ರಷ್ಟು ಸೀಟುಗಳನ್ನು ಸರ್ಕಾರಕ್ಕೆ ನೀಡಿದರೆ ಶೇ.30ರಷ್ಟು ಸೀಟುಗಳನ್ನು ಕಾಮೆಡ್‌-ಕೆಗೆ ಹಂಚಿಕೆ ಮಾಡಲಾಗುತ್ತಿದೆ. ಶೇ 25ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರು/ ಮ್ಯಾನೇಜ್‌ಮೆಂಟ್‌ ಕೋಟಾಗೆ ಮೀಸಲಿಡಲಾಗಿದೆ.

ಇನ್ನು ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಕ್ರಮವಾಗಿ ಶೇಕಡಾ 40:30:30ರ ಅನುಪಾತದಲ್ಲಿ ಸೀಟು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಶೇ 40ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಕೊಟ್ಟರೆ ಶೇ 30ರಷ್ಟು ಸೀಟುಗಳನ್ನು ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ನೀಡಲಾಗುತ್ತದೆ. ಉಳಿದ ಶೇ 30ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರು/ ಮ್ಯಾನೇಜ್‌ಮೆಂಟ್‌ ಕೋಟಾಗೆ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಈ ಬಾರಿ ಯಾವುದೇ ರೀತಿಯಲ್ಲಿಯೂ ಶುಲ್ಕ ಹೆಚ್ಚಳ ಮಾಡಲಾಗುತ್ತಿಲ್ಲ. ಒಂದು ಸಂರಚನೆಯಲ್ಲಿ ಸಿಇಟಿ ವಿದ್ಯಾರ್ಥಿಗಳಿಗೆ ತಲಾ 65,360 ರೂ. ಹಾಗೂ ಕಾಮೆಡ್-ಕೆ ವಿದ್ಯಾರ್ಥಿಗಳಿಗೆ 1,43,748 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ಇನ್ನೊಂದರಲ್ಲಿ ಸಿಇಟಿ ವಿದ್ಯಾರ್ಥಿಗಳಿಗೆ 58,806 ರೂ. ಹಾಗೂ ಕಾಮೆಡ್‌-ಕೆ ವಿದ್ಯಾರ್ಥಿಗಳಿಗೆ 2,01,960 ರೂ. ನಿಗದಿ ಮಾಡಲಾಗಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಈ ವರ್ಷ ಅಕ್ಟೋಬರ್ ತಿಂಗಳ ಒಳಗೆ ಆನ್‌ಲೈನ್‌ ಕೌನ್ಸೆಲಿಂಗ್‌ ಮಾಡಲಾಗುತ್ತದೆ. ವಿದ್ಯಾರ್ಥಿಗಳು ತಾವು ಇದ್ದ ಜಾಗದಿಂದಲೇ ಕೌನ್ಸೆಲಿಂಗ್‌ ಎದುರಿಸಬಹುದು.

ಯಾರೂ ಬೆಂಗಳೂರಿನ ತನಕ ಬರುವ ಅಗತ್ಯವಿಲ್ಲ. ಕಾಲೇಜು ಆಯ್ಕೆ ಮಾಡಿಕೊಂಡ ಮೇಲೆ ಆಯಾ ಕಾಲೇಜಿಗೆ ತೆರಳಿ ನಿಗದಿತ ಅವಧಿಯೊಳಗೆ ಪ್ರವೇಶಾತಿ ಪಡೆಯಬಹುದಾಗಿದೆ. ಎರಡು ರೌಂಡ್‌ ಕೌನ್ಸೆಲಿಂಗ್‌ ಮತ್ತು ಒಂದು ಬಾರಿ ವಿಸ್ತರಿತ ಕೌನ್ಸೆಲಿಂಗ್‌ ಇರುತ್ತದೆ. ಇದು ಬಿಟ್ಟು ಹೆಚ್ಚುವರಿ ಸುತ್ತಿನ ಕೌನ್ಸೆಲಿಂಗ್‌ ಈ ಬಾರಿ ನಡೆಸುವುದಿಲ್ಲ ಎಂದರು.

ಕಾಲೇಜು ಆಡಳಿತ ಮಂಡಳಿಗಳು ಕೂಡ ಭರ್ತಿಯಾಗದ ಸೀಟುಗಳನ್ನು ನಿಗದಿತ ಅವಧಿಯೊಳಗೆ ಸಿಇಟಿಗೆ ವಾಪಸ್‌ ಮಾಡಬೇಕು. ಹಾಗೆ ಮಾಡಿದ 24 ಗಂಟೆಗಳಲ್ಲೇ ಪುನಃ ಸೀಟುಗಳನ್ನು ಕಾಲೇಜುಗಳಿಗೇ ನೀಡಲಾಗುತ್ತದೆ. ಈ ವಿಷಯದಲ್ಲಿ ಯಾರೂ ವಿಳಂಬ ಮಾಡಬಾರದು ಎನ್ನುವ ಸೂಚನೆಯನ್ನು ಕೂಡ ಸಂಘಗಳ ಪ್ರತಿನಿಧಿಗಳಿಗೆ ಸೂಚಿಸಲಾಗಿದೆ. ಈ ಬಾರಿ ಎಲ್ಲವನ್ನೂ ಪಾರದರ್ಶಕರವಾಗಿಯೇ ನಡೆಸಲಾಗುತ್ತಿದ್ದು, ಸೀಟ್ ಬ್ಲಾಕಿಂಗ್ ಗೆ ಅವಕಾಶವಿಲ್ಲ. ಈ ಬಾರಿ ಸಿಇಟಿ ಕೌನ್ಸೆಲಿಂಗ್ ನೀಟ್ ಮತ್ತು ಜೆಇಇ ಕೌನ್ಸೆಲಿಂಗ್ ನಂತರ ನಡೆಯಲಿದೆ ಎಂದಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ಪಾಂಡುರಂಗ ಶೆಟ್ಟಿ, ಡಾ.ಹೇಮಚಂದ್ರ ಸಾಗರ್‌, ಸಿ.ಎಂ.ಲಿಂಗಪ್ಪ, ಶಫೀ ಅಹಮದ್‌ ಹಾಜರಿದ್ದರು. ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣರೆಡ್ಡಿ, ವಿಟಿಯು ಕುಲಪತಿ ಕರಿಸಿದ್ದಪ್ಪ ಅವರು ಆನ್‌ಲೈನ್‌ ಮೂಲಕ ಸಭೆಗೆ ಹಾಜರಾಗಿದ್ದರು. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ ರಾಜಾ, ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್‌ ಸಭೆಯಲ್ಲಿದ್ದರು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular