ಕರ್ನಾಟಕದ ತುಮಕೂರಿನ ಈ ʼವಿಶ್ವವಿದ್ಯಾಲಯʼ ನಕಲಿ! ವಿದ್ಯಾರ್ಥಿಗಳ ಪದವಿ ಅಮಾನ್ಯ
ದೇಶಾದ್ಯಂತ ಕಾನೂನುಬಾಹಿರವಾಗಿ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ವಿರುದ್ಧ ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಸಮರ ಸಾರಿದೆ. ಇತ್ತೀಚಿನ ಅಧಿಕೃತ ಪ್ರಕಟಣೆಯಲ್ಲಿ ಯುಜಿಸಿ ಮೂರು ಪ್ರಮುಖ ನಕಲಿ ಸಂಸ್ಥೆಗಳನ್ನು (Fake Universities) ಗುರುತಿಸಿದ್ದು, ಇದರಲ್ಲಿ ಕರ್ನಾಟಕದ ‘ಸರ್ವ ಭಾರತೀಯ ಶಿಕ್ಷಾ ಪೀಠ’ (Sarva Bharatiya Shiksha Peeth) ಕೂಡ ಸೇರಿದೆ.
ಕರ್ನಾಟಕದ ನಕಲಿ ವಿವಿ ಮೇಲೆ ಯುಜಿಸಿ ಕೆಣ್ಣು
ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿರುವ ‘ಸರ್ವ ಭಾರತೀಯ ಶಿಕ್ಷಾ ಪೀಠ’ಕ್ಕೆ ಯಾವುದೇ ಕಾನೂನಾತ್ಮಕ ಮಾನ್ಯತೆ ಇಲ್ಲದಿದ್ದರೂ, ಅದು ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡುತ್ತಿದೆ ಎಂದು ಯುಜಿಸಿ ಪತ್ತೆಹಚ್ಚಿದೆ. ಭಾರತೀಯ ಕಾನೂನಿನ ಅಡಿಯಲ್ಲಿ ಯಾವುದೇ ಪದವಿ ಅಥವಾ ಪ್ರಮಾಣಪತ್ರಗಳನ್ನು ನೀಡುವ ಅಧಿಕಾರ ಈ ಸಂಸ್ಥೆಗೆ ಇಲ್ಲ ಎಂದು ಆಯೋಗವು ಸ್ಪಷ್ಟಪಡಿಸಿದೆ. ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಸಂಸ್ಥೆಯ ಆಕರ್ಷಕ ಜಾಹೀರಾತುಗಳಿಗೆ ಮರುಳಾಗಿ ತಮ್ಮ ಹಣ ಮತ್ತು ಸಮಯವನ್ನು ವ್ಯರ್ಥ ಮಾಡಿಕೊಳ್ಳಬಾರದು ಎಂದು ಎಚ್ಚರಿಸಲಾಗಿದೆ.
ಯುಜಿಸಿ ಅಧಿಕೃತವಾಗಿ ಹೆಸರಿಸಿರುವ ಈ ನಕಲಿ ಸಂಸ್ಥೆಯು ತುಮಕೂರು ಜಿಲ್ಲೆಯ ವಿಜಯನಗರದ ದೇವನೂರು ಮುಖ್ಯರಸ್ತೆಯಲ್ಲಿರುವ ಎಸ್ ಕೆ ಛೌಲ್ಟ್ರಿ ಸಮೀಪ ಇರುವ ‘ಸರ್ವ ಭಾರತೀಯ ಶಿಕ್ಷಾ ಪೀಠ’ (Sarva Bharatiya Shiksha Peeth) ಆಗಿದೆ. ಈ ಸಂಸ್ಥೆಯು ತನ್ನ ಹೆಸರಿನೊಂದಿಗೆ ‘ವಿಶ್ವವಿದ್ಯಾಲಯ’ ಎಂದು ಬಳಸಿಕೊಳ್ಳುತ್ತಿದ್ದು, ವಿವಿಧ ಪದವಿಗಳನ್ನು ವಿತರಿಸುತ್ತಿದೆ. ಆದರೆ, ಇದಕ್ಕೆ ಯಾವುದೇ ಕಾನೂನಾತ್ಮಕ ಮಾನ್ಯತೆ ಇಲ್ಲ ಎಂದು ಯುಜಿಸಿ ಸ್ಪಷ್ಟಪಡಿಸಿದೆ.
ಇತರ ನಕಲಿ ವಿಶ್ವವಿದ್ಯಾಲಯಗಳು
ಕರ್ನಾಟಕದ ಸಂಸ್ಥೆಯ ಜೊತೆಗೆ ಯುಜಿಸಿ ಇನ್ನುಳಿದ ಎರಡು ಸಂಸ್ಥೆಗಳನ್ನು ಪಟ್ಟಿಗೆ ಸೇರಿಸಿದೆ:
ನಿಮ್ಸ್ (NIMS), ದೆಹಲಿ
ನ್ಯಾಷನಲ್ ಬ್ಯಾಕ್ವರ್ಡ್ ಕೃಷಿ ವಿದ್ಯಾಪೀಠ, ಮಹಾರಾಷ್ಟ್ರ
ಈ ಮೇಲಿನ ಮೂರೂ ಸಂಸ್ಥೆಗಳು ವಿಶ್ವವಿದ್ಯಾಲಯಗಳಾಗಿ ಕಾರ್ಯನಿರ್ವಹಿಸಲು ಯಾವುದೇ ಕಾನೂನುಬದ್ಧ ಅನುಮೋದನೆಯನ್ನು ಪಡೆದಿಲ್ಲ. ಇವು ನೀಡುವ ಪದವಿಗಳು ಉದ್ಯೋಗಕ್ಕೆ ಅಥವಾ ಮುಂದಿನ ಉನ್ನತ ಶಿಕ್ಷಣಕ್ಕೆ ಕಾನೂನುಬದ್ಧವಾಗಿ ಮಾನ್ಯವಾಗುವುದಿಲ್ಲ ಎಂದು ಯುಜಿಸಿ ತಿಳಿಸಿದೆ.
ಪೋಷಕರು ಮತ್ತು ಉದ್ಯೋಗದಾತರಿಗೆ ಸೂಚನೆ
ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲದೆ, ಉದ್ಯೋಗದಾತರೂ ಸಹ ಅಭ್ಯರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಅವರ ಪದವಿ ಪ್ರಮಾಣಪತ್ರಗಳು ಇಂತಹ ನಕಲಿ ಸಂಸ್ಥೆಗಳಿಂದ ಬಂದಿವೆಯೇ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಯುಜಿಸಿ ಸೂಚಿಸಿದೆ. “ಯಾವುದೇ ಸಂಸ್ಥೆಯು ತನ್ನ ಹೆಸರಿನೊಂದಿಗೆ ‘ವಿಶ್ವವಿದ್ಯಾಲಯ’ ಎಂದು ಬಳಸಬೇಕಾದರೆ ಅದು ಕೇಂದ್ರ ಅಥವಾ ರಾಜ್ಯ ಕಾಯ್ದೆಯಡಿ ಸ್ಥಾಪನೆಯಾಗಿರಬೇಕು ಅಥವಾ ಯುಜಿಸಿ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ‘ಡೀಮ್ಡ್ ವಿಶ್ವವಿದ್ಯಾಲಯ’ ಎಂಬ ಮಾನ್ಯತೆ ಪಡೆದಿರಬೇಕು” ಎಂದು ಆಯೋಗವು ನಿಯಮವನ್ನು ನೆನಪಿಸಿದೆ.
ಇದನ್ನೂ ಓದಿ: ಯುಜಿ-ನೀಟ್ 2025ರ 3ನೇ ಸುತ್ತಿನ ಕೌನ್ಸೆಲಿಂಗ್ಗೆ ಮಹತ್ವದ ಅಪ್ಡೇಟ್ ಬಿಡುಗಡೆ
ಉನ್ನತ ಶಿಕ್ಷಣದ ಕನಸು ಕಾಣುವ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುವ ಮುನ್ನ ಯುಜಿಸಿಯ ಅಧಿಕೃತ ವೆಬ್ಸೈಟ್ನಲ್ಲಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಪರಿಶೀಲಿಸುವುದು ಅತ್ಯಗತ್ಯ.



