Sringeri Mutt: ಶೃಂಗೇರಿ ಪೀಠದ ವಿರುದ್ಧ ಷಡ್ಯಂತ್ರ? ಶೃಂಗೇರಿ ಮಠದಿಂದ ಅಧಿಕೃತ ಸ್ಪಷ್ಟನೆ

ಶೃಂಗೇರಿ: ಕಿರುತೆರೆ ನಟಿ ಪಲ್ಲವಿ ಮತ್ತೀಘಟ್ಟ ಅವರು ಶೃಂಗೇರಿ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಗದ್ಗುರುಗಳೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯನ್ನು ಶೃಂಗೇರಿ ಶಾರದಾ ಪೀಠವು ಸಾರಾಸಗಟಾಗಿ ತಳ್ಳಿಹಾಕಿದೆ. ಈ ಕುರಿತು ಮಠದ ಆಡಳಿತಾಧಿಕಾರಿ ಪಿ.ಎ. ಮುರಳಿ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಹರಿದಾಡುತ್ತಿರುವ ಸುದ್ದಿ ಅಪ್ಪಟ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಸುಳ್ಳು ಸುದ್ದಿಯ ಮೂಲಕ ಶೃಂಗೇರಿಯ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆಯೇ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭವಾಗಿದೆ.

ಏನಿದು ವಿವಾದ?
ಕಳೆದ ಶನಿವಾರ (ಡಿಸೆಂಬರ್ 20, 2025) ಶಿರಸಿ ಮೂಲದ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಯೊಂದರಲ್ಲಿ, “ನಟಿ ಪಲ್ಲವಿ ಮತ್ತೀಘಟ್ಟ ಅವರು ಶೃಂಗೇರಿಗೆ ಭೇಟಿ ನೀಡಿ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ದರ್ಶನ ಪಡೆದಿದ್ದಾರೆ ಮತ್ತು ಅವರೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿಶೇಷವಾಗಿ ಮಾತುಕತೆ ನಡೆಸಿದ್ದಾರೆ” ಎಂದು ವರದಿ ಮಾಡಲಾಗಿತ್ತು. ಈ ವರದಿಯು ಭಕ್ತಾದಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು.

ಶ್ರೀಮಠದ ಸ್ಪಷ್ಟೀಕರಣ:
ಈ ಬಗ್ಗೆ ಸ್ಪಷ್ಟನೆ ನೀಡಿರುವ ಶ್ರೀಮಠವು, “ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಇತ್ತೀಚಿನ ಕೆಲವು ವರ್ಷಗಳಿಂದ ಭಕ್ತರಿಗೆ ಕೇವಲ ದರ್ಶನ ನೀಡಿ ಅನುಗ್ರಹಿಸುತ್ತಿದ್ದಾರೆಯೇ ಹೊರತು, ಯಾರ ಬಳಿಯೂ ದೀರ್ಘವಾಗಿ ಮಾತುಕತೆ ನಡೆಸುತ್ತಿಲ್ಲ. ಪಲ್ಲವಿ ಮತ್ತೀಘಟ್ಟ ಅವರು ಸಾಮಾನ್ಯ ಭಕ್ತರಂತೆ ದರ್ಶನ ಪಡೆದಿರಬಹುದೇ ಹೊರತು, ಪತ್ರಿಕೆಯಲ್ಲಿ ಪ್ರಕಟವಾದಂತೆ ಒಂದು ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ ಎಂಬುದು ಸುಳ್ಳು ಸುದ್ದಿ” ಎಂದು ತಿಳಿಸಿದೆ.

ಇದನ್ನೂ ಓದಿ: ಸರ್ಕಾರಿ ರಜೆಗಳ ಪಟ್ಟಿ 2026: ಮುಂದಿನ ವರ್ಷ ಒಟ್ಟು 24 ಸಾರ್ವತ್ರಿಕ ರಜೆಗಳು; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಪ್ರಸ್ತುತ ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರೇ ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದಾರೆ. ಮಹಾಸನ್ನಿಧಾನಂಗಳವರು ಲೋಕಕಲ್ಯಾಣಕ್ಕಾಗಿ ಪ್ರತಿದಿನ ರಾತ್ರಿ ನಡೆಸುವ ಶ್ರೀ ಚಂದ್ರಮೌಳೀಶ್ವರ ಪೂಜೆಯ ನಂತರವಷ್ಟೇ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಜಗದ್ಗುರುಗಳ ವಿಜಯಯಾತ್ರೆಯ ಸಂದರ್ಭದಲ್ಲಿ ಮಾತ್ರ ಮಹಾಸನ್ನಿಧಾನಂಗಳವರು ಭಕ್ತಾದಿಗಳಿಗೆ ಅಲ್ಪ ಅವಧಿಗೆ ಮಧ್ಯಾಹ್ನ ದರ್ಶನ ನೀಡುತ್ತಾರೆ ಎಂದು ಮಠವು ದರ್ಶನದ ಕ್ರಮವನ್ನು ವಿವರಿಸಿದೆ.

ನಟಿ ಪಲ್ಲವಿ ಅವರು ಸಹ ಆ ಮಾಧ್ಯಮ ವರದಿಗಳನ್ನು ನಿರಾಕರಿಸಿದ್ದಾರೆ. ಶೃಂಗೇರಿ ಸೇರಿದಂತೆ ಹಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದು ನಿಜ. ಆದರೆ ಮಾಧ್ಯಮದಲ್ಲಿ ವರದಿಯಾದಂತೆ ಶ್ರೀಗಳ ಜೊತೆಗೆ ಗಂಟೆಗಳ ಕಾಲ ಮಾತುಕತೆ ನಡೆಸಿಲ್ಲ ಎಂದು ಅವರು ತಿಳಿಸಿದ್ದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಹಾಗಿದ್ದರೆ, ನಟಿಯೊಬ್ಬರು ಶೃಂಗೇರಿ ಶ್ರೀಗಳ ಜೊತೆಗೆ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂಬ ಸುಳ್ಳು ಸುದ್ದಿ ಹೇಗೆ ಕೆಲವು ಮಾಧ್ಯಮಗಳಲ್ಲಿ ಪ್ರಕಟಗೊಂಡಿತು ಎಂಬುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಕಾನೂನು ಕ್ರಮದ ಎಚ್ಚರಿಕೆ:
ಶ್ರೀಮಠದ ಮತ್ತು ಜಗದ್ಗುರುಗಳ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಇಂತಹ ಸುಳ್ಳು ಸುದ್ದಿಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ಮಠವು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಇಂತಹ ದಾರಿ ತಪ್ಪಿಸುವ ಸುದ್ದಿಗಳನ್ನು ಪ್ರಕಟಿಸಿದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories