ಉಡುಪಿ ಜಿಲ್ಲೆಯಲ್ಲಿ ಕುಸಿದ ಬಾಲ ಆಧಾರ್ ಸಂಖ್ಯೆ : ಪೋಷಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣ
ದೇಶದಲ್ಲಿ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಬೇಕು ಎಂದರೂ ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯ. ಈ ನಿಯಮಾವಳಿಗಳಿಂದ ಹಸುಗೂಸುಗಳು ಕೂಡ ಹೊರತಾಗಿಲ್ಲ. ಆದರೆ ವಿಪರ್ಯಾಸ ಎಂದರೆ ಬುದ್ಧಿವಂತರ ಜಿಲ್ಲೆ ಎನಿಸಿಕೊಂಡಿರುವ ಉಡುಪಿಯಲ್ಲಿಯೇ ಬಾಲ ಆಧಾರ್ ಮಾಡಿಸುವವರ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಉಡುಪಿ ಜಿಲ್ಲೆಯಲ್ಲಿ 6 ವರ್ಷದೊಳಗಿನ 40,233 ಮಕ್ಕಳಿದ್ದು ಈ ಪೈಕಿ ಆಧಾರ್ ಕಾರ್ಡ್ ಹೊಂದಿರುವವರು 32, 329 ಮಂದಿ ಮಾತ್ರ ಎಂದು ತಿಳಿದುಬಂದಿದೆ.
ಬ್ರಹ್ಮಾವರದಲ್ಲಿ ಒಟ್ಟೂ 8404 ಮಕ್ಕಳ ಪೈಕಿ 1609 ಮಕ್ಕಳು ಬಾಲ ಆಧಾರ್ ಹೊಂದಿಲ್ಲ. ಕಾರ್ಕಳದಲ್ಲಿ ಒಟ್ಟೂ 6364 ಮಕ್ಕಳಿದ್ದು ಇವರಲ್ಲಿ 1023 ಮಕ್ಕಳು ಬಾಲ ಆಧಾರ್ ಮಾಡಿಸಿಕೊಂಡಿಲ್ಲ. ಇನ್ನುಳಿದಂತೆ ಕುಂದಾಪುರದ 15091 ಮಕ್ಕಳ ಪೈಕಿ 3248, ಉಡುಪಿಯಲ್ಲಿ 10374 ಮಕ್ಕಳ ಪೈಕಿ 2024 ಮಕ್ಕಳ ಬಳಿ ಬಾಲ ಆಧಾರ್ ಗುರುತಿನ ಚೀಟಿ ಇಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಬಿರುಗಾಳಿಗೆ ಕುಸಿದ ಕೋಳಿ ಫಾರಂ ಶೆಡ್ : 20 ಲಕ್ಷಕ್ಕೂ ಅಧಿಕ ನಷ್ಟ..
ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಆಧಾರ್ ಮಾಡಿಸಿದರಾಯ್ತು ಎಂಬ ಪೋಷಕರ ನಿರ್ಲಕ್ಷ್ಯ ಧೋರಣೆಯೇ ಇದಕ್ಕೆ ಕಾರಣ ಎನ್ನಲಾಗಿದೆ. 6 ವರ್ಷ ತುಂಬುವವರೆಗೂ ಮಕ್ಕಳಿಗೆ ಬ್ಯಾಂಕ್ ಖಾತೆ, ಪಾಸ್ಪೋರ್ಟ್ ಸೇರಿದಂತೆ ಇನ್ನಿತರ ಯಾವುದೇ ದಾಖಲೆಗಳನ್ನು ಮಾಡುವ ಅವಶ್ಯಕತೆ ಇಲ್ಲದ ಕಾರಣ, ಬಾಲ ಆಧಾರ್ನಿಂದ ಯಾವುದೇ ಪ್ರಯೋಜನ ಇಲ್ಲ ಎನ್ನುವ ಪೋಷಕರ ಅಭಿಪ್ರಾಯವೇ ಆಧಾರ್ ಸಂಖ್ಯೆಯಲ್ಲಿ ಇಳಿಮುಖವಾಗುವುದಕ್ಕೆ ಮುಖ್ಯ ಮೂಲಾಧಾರವಾಗಿದೆ,
ಆದರೆ ಬಾಲ ಆಧಾರ್ ಎನ್ನುವುದು ಅತ್ಯಂತ ಅಗತ್ಯವಿರುವ ದಾಖಲೆಗಳ ಪೈಕಿ ಒಂದಾಗಿದ್ದು ಐದು ವರ್ಷದೊಳಗಿನ ಶಿಶುಗಳಿಗೆ ನೀಡಲಾಗುತ್ತದೆ. ಶಿಶುವಿನಿಂದ ಹಿಡಿದು 5 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಬ್ಯಾಂಕ್ ಖಾತೆ ತೆರೆಯಲು, ಪಾಸ್ಪೋರ್ಟ್ಗಳಿಗೆ ಬಾಲ ಆಧಾರ್ ಅವಶ್ಯಕಬಾಗಿದೆ.



