ಧಾರವಾಡ: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿರುವ ತೂಗುಕತ್ತಿಯಿಂದ ಬಚಾವಾಗಲು ಕಾಂಗ್ರೆಸ್ ನ ಮಾಜಿ ಶಾಸಕ ವಿನಯ್ ಕುಲಕರ್ಣಿ ಬಿಜೆಪಿ ಬಾಗಿಲು ಬಡಿಯುತ್ತಿದ್ದಾರಾ? ಹೌದು ಅಂತಿದೆ ಬಿಜೆಪಿ ಮೂಲಗಳು.

ಕಾಂಗ್ರೆಸ್ ನಲ್ಲಿ ಉಳಿದರೇ ಸಿಬಿಐ ಕುಣಿಕೆಯಿಂದ ಪಾರಾಗೋದು ಕಷ್ಟ ಎಂಬ ಕಾರಣಕ್ಕೆ ಬಿಜೆಪಿ ಅಂಗಳದಲ್ಲಿ ಸೇಫ್ ಆಗಲು ಸರ್ಕಸ್ ಆರಂಭಿಸಿದ್ದು, ಇದಕ್ಕೆ ಮಾಜಿ ಸಚಿವರೊಬ್ಬರ ಸಾಥ್ ಕೂಡ ಸಿಕ್ಕಿದೆ. ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣವನ್ನು ತನಿಖೆಗೆ ಸಿಬಿಐಗೆ ನೀಡಲಾಗಿದ್ದು, ಈ ಕೊಲೆ ಸುಫಾರಿ ಹತ್ಯೆ ಎಂಬ ಅಂಶ ಮನಗಂಡ ಸಿಬಿಐ ತನಿಖೆ ಚುರುಕುಗೊಳಿಸಿದೆ. ಈಗಾಗಲೇ ಮಾಜಿ ಸಚಿವ ಹಾಗೂ ಮಾಜಿ ಶಾಸಕ ವಿನಯ್ ಕುಲಕರ್ಣಿ ಸಹೋದರನನ್ನು ಈ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.
ಹೀಗಾಗಿ ಆತಂಕಕ್ಕೊಳಗಾಗಿರುವ ವಿನಯ್ ಕುಲಕರ್ಣಿ ಬಿಜೆಪಿ ಆಶ್ರಯದಲ್ಲಿ ಸೇಫ್ ಆಗುವ ಪ್ರಯತ್ನ ಆರಂಭಿಸಿದ್ದು, ಇದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಕಳೆದ 15 ದಿನದಿಂದ ಅಮಿತ್ ಶಾ ಭೇಟಿಗೆ ವಿನಯ್ ಕುಲಕರ್ಣಿ ಪ್ರಯತ್ನ ನಡೆಸಿದ್ದು, ಇವರಿಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸಾಥ್ ನೀಡಿ ದೆಹಲಿ ಹಾಗೂ ನಾಗಪುರ ಸೇರಿದಂತೆ ಹಲವೆಡೆ ವಿನಯ್ ಕುಲಕರ್ಣಿಯವರನ್ನು ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಇನ್ನು ಕೊಲೆ ಆರೋಪದಲ್ಲಿ ಹೆಸರು ಕೇಳಿಬಂದಿರೋ ವಿನಯ್ ಕುಲಕರ್ಣಿ ಬಿಜೆಪಿ ಸೇರ್ಪಡೆಗೆ ಬಿಜೆಪಿಯಲ್ಲಿ ವಿರೋಧ ವ್ಯಕ್ತವಾಗಿದ್ದು, ಬಹಿರಂಗವಾಗಿ ಅಸಮಧಾನ ಪ್ರದರ್ಶನವಾಗದೇ ಇದ್ದರೂ ಆಂತರಿಕವಾಗಿ ವಿನಯ್ ಕುಲಕರ್ಣಿ ಪಕ್ಷಕ್ಕೆ ಸೇರಿಸದಂತೆ ಹಿರಿಯ ನಾಯಕರ ಮನವೊಲಿಸುವ ಪ್ರಯತ್ನಗಳು ಜೋರಾಗಿ ನಡೆದಿದೆ.
ಸಾಮಾನ್ಯವಾಗಿ ಪಕ್ಷ ಸೇರ್ಪಡೆಯಾಗಲು ಬಯಸುವ ನಾಯಕರು ಜಿಲ್ಲಾಮಟ್ಟದ ನಾಯಕರ ಮೊರೆ ಹೋಗುವುದು ವಾಡಿಕೆ. ಆದರೆ ವಿನಯ್ ಕುಲಕರ್ಣಿ ಬಿಜೆಪಿ ಸೇರ್ಪಡೆ ಬಗ್ಗೆ ಶಾಸಕ ಹಾಗೂ ಸಚಿವ ಜಗದೀಶ್ ಶೆಟ್ಟರ್ ಗೆ ಯಾವುದೇ ಮಾಹಿತಿ ಇಲ್ಲ ಎನ್ನಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ಶೆಟ್ಟರ್ ನಿರಾಕರಿಸಿದ್ದಾರೆ.
ಇನ್ನು ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಯೋಗೇಶ್ ಗೌಡ ತಮಗೆ ರಾಜಕೀಯವಾಗಿ ಮುಳ್ಳಾಗಬಹುದೆಂಬ ಕಾರಣಕ್ಕೆ ಪ್ರಭಾವಿ ಶಾಸಕ-ಸಚಿವರು ಹತ್ಯೆ ಮಾಡಿಸಿದ್ದಾರೆ ಎಂಬ ಮಾತು ಹುಬ್ಬಳ್ಳಿ-ಧಾರವಾಡದಲ್ಲಿ ಚಾಲ್ತಿಯಲ್ಲಿದೆ. ಎಲ್ಲ ಅಂಶಗಳನ್ನು ಪರಿಶೀಲಿಸಿದರೇ ಬಿಜೆಪಿ ನಾಯಕರು ವಿನಯ್ ಕುಲಕರ್ಣಿ ಬಿಜೆಪಿ ಸೇರ್ಪಡೆಗೆ ರೆಡ್ ಕಾರ್ಪೆಟ್ ಹಾಸೋದು ಅನುಮಾನ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.