ಉಡುಪಿ: ರೂಮ್‌ಮೇಟ್ ಮೇಲೆಯೇ ಮಾರಣಾಂತಿಕ ಹಲ್ಲೆ; ಚಿನ್ನಾಭರಣ ದೋಚಿದ ಮಹಿಳೆ ಬಂಧನ

ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮಹಿಳೆಯ ಮೇಲಿನ ಮಾರಣಾಂತಿಕ ಹಲ್ಲೆ ಹಾಗೂ ಚಿನ್ನಾಭರಣ ದರೋಡೆ ಪ್ರಕರಣವನ್ನು ಪೊಲೀಸರು ಕ್ಷಿಪ್ರವಾಗಿ ಭೇದಿಸಿ ಆರೋಪಿತೆಯನ್ನು ಬಂಧಿಸಿದ್ದಾರೆ.

ಉಡುಪಿ: ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮಹಿಳೆಯ ಮೇಲಿನ ಮಾರಣಾಂತಿಕ ಹಲ್ಲೆ ಹಾಗೂ ಚಿನ್ನಾಭರಣ ದರೋಡೆ ಪ್ರಕರಣವನ್ನು ಪೊಲೀಸರು ಕ್ಷಿಪ್ರವಾಗಿ ಭೇದಿಸಿ ಆರೋಪಿತೆಯನ್ನು ಬಂಧಿಸಿದ್ದಾರೆ.

ಮೇಘಾ ಗೌಡ ಅವರು ತಮ್ಮ ಸ್ನೇಹಿತೆಯರಾದ ನಾಗರತ್ನ, ಗಗನಾ ಹಾಗೂ ಯೋಗಿತಾ ಅವರೊಂದಿಗೆ ಮಣಿಪಾಲದ ಶಾಂತಿನಗರದ ಬಳಿಯ ಸುದರ್ಶನ ಕಾಂಪ್ಲೆಕ್ಸ್‌ನ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು. ಮೇ 12ರಂದು ಸಂಜೆ ಕೆಲಸಕ್ಕಾಗಿ ಇಂಡಸ್ಟ್ರಿಯಲ್ ಏರಿಯಾದ ಯುನಿಟ್-5 ಪ್ರೆಸ್‌ಗೆ ರಾತ್ರಿ ಪಾಳಿಗೆ ತೆರಳಿದ್ದ ಮೇಘಾ ಗೌಡ, ನಾಗರತ್ನ ಮತ್ತು ಗಗನಾ ಅವರು ಮೇ 13ರ ಬೆಳಿಗ್ಗೆ ಸುಮಾರು 7.15ಕ್ಕೆ ಮರಳಿ ಬಂದಾಗ ಕೊಠಡಿಯ ಬಾಗಿಲು ಅರೆತೆರೆದ ಸ್ಥಿತಿಯಲ್ಲಿ ಕಂಡುಬಂದಿದೆ.

ಕೊಠಡಿಗೆ ಪ್ರವೇಶಿಸಿದಾಗ ಯೋಗಿತಾ ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಆಕೆಯ ತಲೆಗೆ ಗಂಭೀರ ಗಾಯಗಳಾಗಿದ್ದು, ಪಕ್ಕದಲ್ಲೇ ತುಂಡಾದ ಸಿಮೆಂಟ್ ಕಲ್ಲುಗಳು ಪತ್ತೆಯಾಗಿದ್ದವು. ಅಲ್ಲದೆ, ಯೋಗಿತಾಳ ಕುತ್ತಿಗೆಯಲ್ಲಿದ್ದ ಸುಮಾರು 8 ಗ್ರಾಂ ತೂಕದ ಚಿನ್ನದ ಸರ ಹಾಗೂ ಕಿವಿಯ ಬೆಂಡೋಲೆಗಳು ಕಾಣೆಯಾಗಿದ್ದವು. ಗಾಯಾಳುವನ್ನು ತಕ್ಷಣ ಮಣಿಪಾಲದ ಕಸ್ತೂರಬಾ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಕುರಿತು ಮೇಘಾ ಗೌಡ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಗಮನಿಸಿ ಉಡುಪಿ ಪೊಲೀಸ್‌ ರು ವಿಶೇಷ ತನಿಖಾ ತಂಡ ರಚಿಸಿ, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಹಾಗೂ ಸುತ್ತಮುತ್ತಲಿನ ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಿದಾಗ, ಯೋಗಿತಾಳ ಪಕ್ಕದ ಕೊಠಡಿಯಲ್ಲಿ ವಾಸವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾವಿಕೇರಿ ಗ್ರಾಮದ ಸುಷ್ಮಾ ಅಣ್ಣಪ್ಪ ನಾಯ್ಕ್ (31) ಮೇಲೆ ಅನುಮಾನ ವ್ಯಕ್ತವಾಗಿತ್ತು.

ವಿಚಾರಣೆಯಲ್ಲಿ ಆರೋಪಿತೆ ತಪ್ಪೊಪ್ಪಿಕೊಂಡಿದ್ದು, ಹಣಕಾಸಿನ ತೊಂದರೆ ಹಾಗೂ ಮನೆಯವರ ಒತ್ತಡದಿಂದ ಯೋಗಿತಾಳ ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದಾಗಿ ತಿಳಿಸಿದ್ದಾಳೆ. ಮೇ 12ರ ರಾತ್ರಿ ಯೋಗಿತಾಳೊಂದಿಗೆ ಅದೇ ಕೊಠಡಿಯಲ್ಲಿ ಮಲಗಿದ್ದ ಆರೋಪಿ, ಮುಂಜಾನೆ ವೇಳೆ ಪೂರ್ವಸಿದ್ಧತೆಯಾಗಿ ತಂದಿಟ್ಟಿದ್ದ ಕಾಂಕ್ರೀಟ್ ಹೋಲೋ ಬ್ಲಾಕ್ ಕಲ್ಲಿನಿಂದ ಯೋಗಿತಾಳ ತಲೆಗೆ ಹೊಡೆದು ಗಾಯಗೊಳಿಸಿ, ಬಳಿಕ ಚಿನ್ನದ ಸರ ಹಾಗೂ ಬೆಂಡೋಲೆಗಳನ್ನು ದೋಚಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಈ ಘಟನೆಯ ಬಳಿಕ ಯೋಗಿತಾಳ ರೂಮ್‌ಮೇಟ್‌ಗಳು ಮನೆಗೆ ಬಂದಾಗ, ಆರೋಪಿತೆಯೂ ನಿರಪರಾಧಿಯಂತೆ ಹೊರಬಂದು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದ್ದಳು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮೇ 13ರಂದು ಆರೋಪಿತೆಯನ್ನು ಬಂಧಿಸಿದ ಪೊಲೀಸರು, ಪ್ರಕರಣದಲ್ಲಿ ಅಪಹರಿಸಲಾದ ಚಿನ್ನದ ಸರ ಮತ್ತು ಬೆಂಡೋಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆಯಲ್ಲಿ ಪಿಎಸ್‌ಐ ತಿಮ್ಮೇಶ್ ಬಿ.ಎನ್., ಪಿಎಸ್‌ಐ ಶಂಭುಲಿಂಗಯ್ಯ, ಎಎಸ್‌ಐ ವಿವೇಕ್ ಹಾಗೂ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು. ಜಿಲ್ಲಾ ತಾಂತ್ರಿಕ ವಿಭಾಗ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೂ ತನಿಖೆಗೆ ಸಹಕಾರ ನೀಡಿದ್ದರು.

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories