ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ಹವಾಮಾನ: ಮೀನುಗಾರರೇ ನೀರಿಗಿಳಿಯಬೇಡಿ ಎಂದ ಐಎಂಡಿ

ಮೇ 20ರಿಂದ 25ರವರೆಗೆ ಅರಬ್ಬಿ ಸಮುದ್ರ ತೀರದಲ್ಲಿ ಗಾಳಿಯ ತೀವ್ರತೆ ಮಿತಿಮೀರಲಿದ್ದು, ಮೀನುಗಾರರಿಗೆ ಹವಾಮಾನ ಇಲಾಖೆ ತುರ್ತು ಎಚ್ಚರಿಕೆ ಹೊರಡಿಸಿದೆ.

ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದ್ದು, ದಕ್ಷಿಣ ಭಾರತದ ಮೀನುಗಾರರಿಗೆ ಮೀನುಗಾರಿಕೆ ನಡೆಸದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ರಾಜ್ಯದ ಕರಾವಳಿ ಭಾಗಕ್ಕೂ ಈ ನಿಯಮ ಅನ್ವಯವಾಗಲಿದೆ. ಮೇ 20ರಿಂದ 25ರವರೆಗೆ ಅರಬ್ಬಿ ಸಮುದ್ರ ತೀರದಲ್ಲಿ ಗಾಳಿಯ ತೀವ್ರತೆ ಮಿತಿಮೀರಲಿದ್ದು, ಮೀನುಗಾರರಿಗೆ ಹವಾಮಾನ ಇಲಾಖೆ ತುರ್ತು ಎಚ್ಚರಿಕೆ ಹೊರಡಿಸಿದೆ.

ಅರಬ್ಬೀ ಸಮುದ್ರದ ನೈಋತ್ಯ ಭಾಗ ಹಾಗೂ ಸೊಮಾಲಿಯಾ ಕರಾವಳಿ ಪ್ರದೇಶಗಳಲ್ಲಿ ತೀವ್ರ ಗಾಳಿ ಬೀಸುವ ನಿರೀಕ್ಷೆಯಿದ್ದು, ಗಾಳಿಯ ವೇಗ ಗಂಟೆಗೆ 65 ಕಿ.ಮೀ ತಲುಪುವ ಸಾಧ್ಯತೆಯಿದೆ ಎನ್ನಲಾಗಿದೆ. ಆದ್ದರಿಂದ ಕರ್ನಾಟಕದ ಕರಾವಳಿ ಭಾಗವೂ ಸೇರಿದಂತೆ, ಕೇರಳ, ಲಕ್ಷದ್ವೀಪ, ಮಾಲ್ಡೀವ್ಸ್ ಹಾಗೂ ಕೊಮೊರಿನ್ ಸಮುದ್ರ ಪ್ರದೇಶಗಳಿಗೆ ತುರ್ತು ಅಲರ್ಟ್ ಘೋಷಿಸಲಾಗಿದೆ.

ಇನ್ನು ಈಗಾಗಲೇ ಮೀನುಗಾರಿಕೆಗೆ ತೆರಳಿರುವವರಿಗೆ ಕೂಡಲೇ ವಾಪಸ್ಸಾಗುವಂತೆ ಸೂಚನೆ ತಲುಪಿಸಲಾಗಿದೆ.  ಸಮುದ್ರದ ಅಲೆಗಳ ಎತ್ತರ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಯಾವುದೇ ಸಾಹಸಗಳಿಗೆ ಮುಂದಾಗದಂತೆ ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ ಮಾತ್ರವಲ್ಲದೆ ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರ ಸೇರಿದಂತೆ ಹಲವು ಕರಾವಳಿ ರಾಜ್ಯಗಳಿಗೆ ತುರ್ತು ಎಚ್ಚರಿಕಾ ಸಂದೇಶ ರವಾನಿಸಲಾಗಿದೆ. ಅಲ್ಲದೆ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ರಾಜ್ಯಗಳ ವಿಪತ್ತು ನಿರ್ವಹಣಾ ಕೇಂದ್ರಗಳಿಗೂ ಹೈ ಅಲರ್ಟ್ ಘೋಷಿಸಲಾಗಿದೆ.

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories