ಉತ್ತರ ಕನ್ನಡದಲ್ಲಿ ಜಲಸಾಹಸ ಕ್ರೀಡೆಗಳಿಗೆ ನಿರ್ಬಂಧ ಆದೇಶ ತೆರವು: ಪ್ರವಾಸಿಗರು ಫುಲ್ ಖುಶ್
ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಜಲಸಾಹಸ ಕ್ರೀಡೆಗಳಿಗೆ ಪ್ರವಾಸೋದ್ಯಮ ಇಲಾಖೆ ಹೊರಡಿಸಿದ್ದ ನಿರ್ಬಂಧವನ್ನು ಕೇವಲ ಒಂದೇ ದಿನದಲ್ಲಿ ಜಿಲ್ಲಾಡಳಿತ ತೆರವುಗೊಳಿಸಿದೆ.
ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಜಲಸಾಹಸ ಕ್ರೀಡೆಗಳಿಗೆ ಪ್ರವಾಸೋದ್ಯಮ ಇಲಾಖೆ ಹೊರಡಿಸಿದ್ದ ನಿರ್ಬಂಧವನ್ನು ಕೇವಲ ಒಂದೇ ದಿನದಲ್ಲಿ ಜಿಲ್ಲಾಡಳಿತ ತೆರವುಗೊಳಿಸಿದೆ. ಜಿಲ್ಲೆಯ ಜಲಸಾಹಸ ಕ್ರೀಡೆಗಳಿಗೆ ಮುಂಗಾರು ಪೂರ್ಣಗೊಳ್ಳುವವರೆಗೂ ಅನುಮತಿ ಇಲ್ಲ ಎಂದು ಪ್ರವಾಸೋದ್ಯಮ ಇಲಾಖೆಯು ಆದೇಶ ಹೊರಡಿಸಿತ್ತು.
ಜಿಲ್ಲಾಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತಾರದೇ ಪ್ರವಾಸೋದ್ಯಮ ಇಲಾಖೆ ಈ ಆದೇಶವನ್ನು ಹೊರಡಿಸಿತ್ತು. ಹೀಗಾಗಿ ಈ ಆದೇಶವನ್ನು ತೆರವುಗೊಳಿಸಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ ಗೋಕರ್ಣ, ಮುರುಡೇಶ್ವರ, ಕಾರವಾರ, ಹೊನ್ನಾವರ, ದಾಂಡೇಲಿ ಜಲಸಾಹಸ ಕ್ರೀಡೆ ಮುಂದುವರಿಸಲು ಅನುಮತಿ ನೀಡಿದ್ದಾರೆ.
ಹೀಗಾಗಿ ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ. ವಿದ್ಯಾರ್ಥಿಗಳ ಬೇಸಿಗೆ ರಜೆ ಇನ್ನೂ ಮುಗಿಯದ ಕಾರಣ, ಈ ಭಾಗಕ್ಕೆ ಪ್ರವಾಸಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚೇಇತ್ತು. ಪ್ರವಾಸೋದ್ಯಮ ಇಲಾಖೆಯ ನಿರ್ಬಂಧದಿಂದ ಇಲ್ಲಿನ ವ್ಯಾಪಾರಸ್ಥರೂ ಕಂಗಾಲಾಗಿದ್ದರು. ಆದರೆ ಇದೀಗ ಜಿಲ್ಲಾಡಳಿತ ನಿರ್ಬಂಧ ತೆರವುಗೊಳಿಸಿರುವುದು ಸ್ಥಳೀಯ ವ್ಯಾಪಾರಸ್ಥರು ಹಾಗೂ ಪ್ರವಾಸಿಗರಿಗೆ ಸಂತಸ ತಂದಿದೆ.



