ಕೆನರಾ ಬ್ಯಾಂಕ್ ನಿಂದ ರೈತರಿಗೆ ಭರ್ಜರಿ ಸಾಲ ಯೋಜನೆ! ಕೃಷಿ ಮತ್ತು ಪಶುಸಂಗೋಪನೆಗೆ ಆರ್ಥಿಕ ನೆರವು

ರೈತರ ಆರ್ಥಿಕ ಸಂಕಷ್ಟಕ್ಕೆ ನೆರವಾಗಲು ಕ್ಯಾನರಾ ಬ್ಯಾಂಕ್ ವಿಶೇಷ ಕಿಸಾನ್ ಯೋಜನೆ ಆರಂಭಿಸಿದೆ. ಅರ್ಹ ರೈತರಿಗೆ ಲಕ್ಷಾಂತರ ರೂಪಾಯಿ ಓವರ್ ಡ್ರಾಫ್ಟ್ ಸೌಲಭ್ಯ ಲಭ್ಯವಾಗುತ್ತಿದ್ದು, ಕೃಷಿ ಕೆಲಸಗಳಿಗೆ ದೊಡ್ಡ ನೆರವಾಗಲಿದೆ.

ಕೃಷಿ ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಮಯದಲ್ಲಿ ರೈತರಿಗೆ ನೆರವಾಗಲು ಕೆನರಾ ಬ್ಯಾಂಕ್ ( Canara Bank) ಹೊಸ ಕಿಸಾನ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಮೂಲಕ ಅರ್ಹ ರೈತರು ಲಕ್ಷಾಂತರ ರೂಪಾಯಿ ಸಾಲ ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದಾಗಿದೆ.

ಸಾಮಾನ್ಯ ಬೆಳೆ ಸಾಲಗಳಿಗಿಂತ ವಿಭಿನ್ನವಾಗಿ ಈ ಯೋಜನೆ ಓವರ್ ಡ್ರಾಫ್ಟ್ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಕೃಷಿ ಚಟುವಟಿಕೆಗಳು, ಪಶುಸಂಗೋಪನೆ, ಕೋಳಿ ಸಾಕಣೆ ಸೇರಿದಂತೆ ವಿವಿಧ ಕೃಷಿ ಸಂಬಂಧಿತ ಅಗತ್ಯಗಳಿಗೆ ಈ ಹಣವನ್ನು ಬಳಸಿಕೊಳ್ಳಬಹುದಾಗಿದೆ. ದಿನನಿತ್ಯದ ಕೃಷಿ ನಿರ್ವಹಣೆಗೆ ಬೇಕಾಗುವ ಕಾರ್ಯಾಚರಣಾ ವೆಚ್ಚಗಳಿಗೂ ಇದು ಉಪಯೋಗವಾಗಲಿದೆ.

ಯಾರಿಗೆ ಸಿಗಲಿದೆ ಕೆನರಾ ಬ್ಯಾಂಕ್‌ನ ಈ ಸಾಲ

ಕಳೆದ ಮೂರು ವರ್ಷಗಳಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಪಡೆದು, ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ ರೈತರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವೈಯಕ್ತಿಕ ರೈತರು, ಸ್ವಸಹಾಯ ಸಂಘಗಳು ಹಾಗೂ ಜಂಟಿ ಹೊಣೆಗಾರಿಕೆ ಗುಂಪುಗಳಿಗೂ ಈ ಯೋಜನೆಯ ಸೌಲಭ್ಯ ದೊರೆಯಲಿದೆ.

ಜಮೀನು ಮಾಲೀಕರಷ್ಟೇ ಅಲ್ಲದೆ ಜಿಪಿಎ ದಾಖಲೆ ಹೊಂದಿರುವವರೂ ಕೂಡ ಈ ಯೋಜನೆಯಡಿ ಸಾಲ ಪಡೆಯಬಹುದಾಗಿದೆ. ಆದರೆ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಡಿಫಾಲ್ಟರ್ ಆಗಿರಬಾರದು ಎಂಬ ಷರತ್ತು ಅನ್ವಯವಾಗುತ್ತದೆ.

ಎಷ್ಟು ಸಾಲ ಸಿಗಲಿದೆ

ರೈತರ ಆಸ್ತಿಯ ಮೌಲ್ಯದ ಆಧಾರದ ಮೇಲೆ ಕನಿಷ್ಠ 1.50 ಲಕ್ಷ ರೂಪಾಯಿಯಿಂದ ಗರಿಷ್ಠ 12.50 ಲಕ್ಷ ರೂಪಾಯಿವರೆಗೆ ಓವರ್ ಡ್ರಾಫ್ಟ್ ಸೌಲಭ್ಯ ಸಿಗಲಿದೆ. ಪ್ರತಿ ಎಕರೆಗೆ ನಿಗದಿತ ಮೌಲ್ಯ ಆಧರಿಸಿ ಬ್ಯಾಂಕ್ ಸಾಲದ ಮಿತಿಯನ್ನು ಲೆಕ್ಕ ಹಾಕುತ್ತದೆ.

ಕೃಷಿ ಭೂಮಿಯ ಮೌಲ್ಯದ 50 ಶೇಕಡಾ ಒಳಗೆ ಅಥವಾ ಪ್ರತಿ ಎಕರೆಗೆ 1.50 ಲಕ್ಷ ರೂಪಾಯಿ ಮಿತಿಯಲ್ಲಿ ಸಾಲ ಮಂಜೂರು ಮಾಡಲಾಗುತ್ತದೆ. ಬ್ಯಾಂಕ್ ನೀಡುವ ಒಟ್ಟು ಸಾಲದ ಮೊತ್ತಕ್ಕಿಂತ ಕನಿಷ್ಠ ಎರಡು ಪಟ್ಟು ಮೌಲ್ಯದ ಆಸ್ತಿಯನ್ನು ಭದ್ರತಾ ಗಿರವಿಯಾಗಿ ಇಡಬೇಕಾಗುತ್ತದೆ.

ಕೃಷಿ ಯಂತ್ರೋಪಕರಣಗಳಿಗೆ ಸಹಾಯ

ಟ್ರಾಕ್ಟರ್ ದುರಸ್ತಿ, ಹೊಸ ಕೃಷಿ ಯಂತ್ರಗಳ ಖರೀದಿ, ಹಳೆಯ ಉಪಕರಣಗಳ ಬದಲಾವಣೆ ಸೇರಿದಂತೆ ಹಲವು ಅಗತ್ಯಗಳಿಗೆ ಈ ಹಣ ಬಳಸಬಹುದು. ಮನೆಗೆ ತುರ್ತು ವೆಚ್ಚ ಬಂದಾಗ ಅಥವಾ ಹೆಚ್ಚಿನ ಬಡ್ಡಿದರದ ಖಾಸಗಿ ಸಾಲ ತೀರಿಸಲು ಕೂಡ ಈ ಯೋಜನೆ ನೆರವಾಗಲಿದೆ.

ಯೋಜನೆಯಡಿ ಗಿರವಿಯಾಗುವ ಆಸ್ತಿಯಲ್ಲಿ ಕನಿಷ್ಠ 15 ಶೇಕಡಾ ಮೌಲ್ಯದ ನಿವಾಸಿ ಮನೆ ಆಸ್ತಿ ಇರಬೇಕು ಎಂಬ ನಿಯಮವೂ ಇದೆ. ಈ ಓವರ್ ಡ್ರಾಫ್ಟ್ ಖಾತೆಯ ಅವಧಿ 12 ತಿಂಗಳುಗಳಾಗಿದ್ದು, ಮಾರ್ಚ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸೇರುವ ಬಡ್ಡಿಯನ್ನು 90 ದಿನಗಳೊಳಗೆ ಪಾವತಿಸಬೇಕಾಗುತ್ತದೆ.

ರೈತರಿಗೆ ದೊಡ್ಡ ನೆರವು

ಕೃಷಿ ಹೂಡಿಕೆಗಾಗಿ ತಕ್ಷಣ ಹಣ ಬೇಕಾಗುವ ಸಂದರ್ಭಗಳಲ್ಲಿ ಈ ಯೋಜನೆ ರೈತರಿಗೆ ಉತ್ತಮ ಆಯ್ಕೆಯಾಗಿ ಪರಿಣಮಿಸಬಹುದು ಎಂದು ಬ್ಯಾಂಕಿಂಗ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಡಿಮೆ ತೊಂದರೆಯಲ್ಲಿ ದೊಡ್ಡ ಮೊತ್ತದ ಹಣ ಲಭ್ಯವಾಗುವುದರಿಂದ ಗ್ರಾಮೀಣ ಪ್ರದೇಶದ ರೈತರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಲಿದೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories