Bhatkal Tragedy: ಕಪ್ಪೆಚಿಪ್ಪು ತೆಗೆಯಲು ತೆರಳಿದ್ದ 8 ಮಂದಿ ದಾರುಣ ಸಾವು

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟಿಹಕ್ಕಲ ನದಿಯಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿದ್ದ 8 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

Bhatkal Tragedy: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಟ್ಟಿಹಕ್ಕಲ ನದಿಯಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿದ್ದ ಎಂಟು ಜನ ನೀರು ಪಾಲಾಗಿರುವ ಘೋರ ದುರಂತವೊಂದು ಸಂಭವಿಸಿದೆ. ಈ ದಾರುಣ ಘಟನೆಯು ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ತೆರಳಿದ್ದ ಸಂದರ್ಭದಲ್ಲಿ ನೀರಿನ ಆಳ ಹಾಗೂ ಹರಿವಿನ ವೇಗವನ್ನು ಅಂದಾಜಿಸಲಾಗದೆ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಮೃತರನ್ನು ಸ್ಥಳೀಯ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಭಾನುವಾರ ರಜಾದಿನವಾಗಿದ್ದರಿಂದ ಕಪ್ಪೆಚಿಪ್ಪು ಸಂಗ್ರಹಿಸಿ ಅಡುಗೆ ಮಾಡಲು ಹೋದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಮೀನುಗಾರರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ನದಿಯ ಆಳದಲ್ಲಿದ್ದ ಮೃತದೇಹಗಳನ್ನು ತೀವ್ರ ಶ್ರಮವಹಿಸಿ ಹೊರತೆಗೆಯಲಾಗಿದೆ .

ಸ್ಥಳೀಯ ಮೀನುಗಾರರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ನಡೆಸಿದ ತೀವ್ರ ರಕ್ಷಣಾ ಕಾರ್ಯಾಚರಣೆಯ ಬಳಿಕ ಎಲ್ಲ ಮೃತದೇಹಗಳನ್ನು ಪತ್ತೆಹಚ್ಚಿ ದಂಡೆಗೆ ತರಲಾಗಿದೆ. ಸದ್ಯ ಮೃತಪಟ್ಟ ದುರ್ದೈವಿಗಳ ಸಂಪೂರ್ಣ ವಿವರ ಲಭ್ಯವಾಗಿದ್ದು, ಮೃತರನ್ನು ಪಡುಶಿರಾಲಿ ಬೆಂಗ್ರೆಯ ಲಕ್ಷ್ಮಿ ಮಹಾದೇವ ನಾಯ್ಕ (42), ಶಾರದಾಹೊಳೆಯ ಉಮೇಶ ನಾಯ್ಕ (30), ಲಕ್ಷ್ಮಿ ನಾಯ್ಕ (30), ಲಕ್ಷ್ಮಿ ಅಣ್ಣಪ್ಪ ನಾಯ್ಕ (60), ಲಕ್ಷ್ಮಿ ಶಿವರಾಮ ನಾಯ್ಕ (49), ಜ್ಯೋತಿ ನಾಗಪ್ಪ ನಾಯ್ಕ (34), ಮಾಲತಿ ನಾಯ್ಕ (38), ಮಾಸ್ತಮ್ಮ ನಾಯ್ಕ ಗುರುತಿಸಲಾಗಿದೆ.

ಒಂದೇ ಗ್ರಾಮದ ಎಂಟು ಮಂದಿ ಒಟ್ಟಿಗೆ ಸಾವನ್ನಪ್ಪಿರುವುದು ಇಡೀ ತಟ್ಟಿಹಕ್ಕಲ ಗ್ರಾಮವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories