ಆಗಸ್ಟ್ 1ರಿಂದ ಹೊಸ ರೂಲ್ಸ್! ಡ್ರೈವಿಂಗ್ ಲೈಸೆನ್ಸ್‌ಗೆ ಈ ಪ್ರಮಾಣಪತ್ರ ಕಡ್ಡಾಯ
ಆಗಸ್ಟ್ 1ರಿಂದ ಮಹಾರಾಷ್ಟ್ರದಲ್ಲಿ ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಣಿಜ್ಯ ವಾಹನ ಪರವಾನಗಿ ಪಡೆಯಲು ನಿವಾಸ ಪ್ರಮಾಣಪತ್ರ ಕಡ್ಡಾಯವಾಗಲಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಅಕ್ರಮ ಸಾರಿಗೆ ನಿಯಂತ್ರಣಕ್ಕೆ ಸರ್ಕಾರ ಹೊಸ ನಿಯಮ ಜಾರಿಗೆ ತರುತ್ತಿದೆ.

ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಣಿಜ್ಯ ವಾಹನ ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ಮಹಾರಾಷ್ಟ್ರ ಸರ್ಕಾರ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಆಗಸ್ಟ್ 1, 2026ರಿಂದ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಣಿಜ್ಯ ವಾಹನಗಳಿಗೆ ಸಂಬಂಧಿಸಿದ ಅನುಮತಿ ಪಡೆಯುವವರಿಗೆ ನಿವಾಸ ಪ್ರಮಾಣಪತ್ರ ಕಡ್ಡಾಯಗೊಳಿಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ.
ರಾಜ್ಯದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ವಿಧಾನಸಭೆಯ ಮಳೆಗಾಲದ ಅಧಿವೇಶನದಲ್ಲಿ ಈ ಮಾಹಿತಿ ನೀಡಿದರು. ಹೊಸ ನಿಯಮಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಈಗಾಗಲೇ ಕಾನೂನು ಇಲಾಖೆಗೆ ಕಳುಹಿಸಲಾಗಿದ್ದು, ಅಂತಿಮ ಅನುಮೋದನೆ ದೊರಕಿದ ಬಳಿಕ ಅಧಿಕೃತವಾಗಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಈ ನಿರ್ಧಾರದ ಪ್ರಮುಖ ಉದ್ದೇಶ ಅಕ್ರಮ ಸಾರಿಗೆ ಚಟುವಟಿಕೆಗಳನ್ನು ನಿಯಂತ್ರಿಸುವುದು ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವುದಾಗಿದೆ. ವಿಶೇಷವಾಗಿ ಆ್ಯಪ್ ಆಧಾರಿತ ಕ್ಯಾಬ್ ಮತ್ತು ಬೈಕ್ ಟ್ಯಾಕ್ಸಿ ಸೇವೆಗಳಲ್ಲಿ ಸ್ಥಳೀಯ ಜವಾಬ್ದಾರಿಯನ್ನು ಬಲಪಡಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಹಲವು ಮಂದಿ ಹೊರರಾಜ್ಯಗಳಿಂದ ಬಂದು ಅಗತ್ಯ ದಾಖಲೆಗಳಿಲ್ಲದೆ ವಾಣಿಜ್ಯ ಸಾರಿಗೆ ಸೇವೆ ನಡೆಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಇದರಿಂದ ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರ ಸುರಕ್ಷತೆಗೂ ಧಕ್ಕೆಯಾಗುತ್ತಿದೆ ಎಂದು ಸರ್ಕಾರದ ಗಮನಕ್ಕೆ ತರಲಾಗಿತ್ತು.
ಹೊಸ ನಿಯಮದ ಪ್ರಕಾರ, ಮಹಾರಾಷ್ಟ್ರದ ನಿವಾಸ ಪ್ರಮಾಣಪತ್ರ ಹೊಂದಿರುವವರಿಗೆ ಮಾತ್ರ ವಾಣಿಜ್ಯ ವಾಹನ ಸೇವೆಗಳ ಪರವಾನಗಿ ನೀಡುವ ಬಗ್ಗೆ ಸರ್ಕಾರ ಯೋಜನೆ ರೂಪಿಸಿದೆ. ಪ್ರಸ್ತುತ ರಾಜ್ಯದ ನಿಯಮದಂತೆ ನಿವಾಸ ಪ್ರಮಾಣಪತ್ರ ಪಡೆಯಲು ಕನಿಷ್ಠ 15 ವರ್ಷ ರಾಜ್ಯದಲ್ಲಿ ವಾಸಿಸಿರುವ ದಾಖಲೆ ಇರಬೇಕು.
ಇದೇ ವೇಳೆ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆಗಳಿಗೂ ಹೊಸ ಮಾರ್ಗಸೂಚಿಗಳನ್ನು ತರಲು ಸರ್ಕಾರ ಸಿದ್ಧವಾಗಿದೆ. ಪ್ರತಿ ಪ್ರಯಾಣಕ್ಕೆ ಸರ್ಕಾರಕ್ಕೆ ₹5 ಶುಲ್ಕ ಪಾವತಿಸಬೇಕಾಗುತ್ತದೆ. ಜೊತೆಗೆ ಚಾಲಕರ ಕಲ್ಯಾಣ ನಿಧಿಗೆ ₹2 ಜಮೆಯಾಗಲಿದೆ. ವಾಣಿಜ್ಯ ಚಾಲಕರು ಮಾನ್ಯ ಡ್ರೈವಿಂಗ್ ಲೈಸೆನ್ಸ್, ಪಬ್ಲಿಕ್ ಸರ್ವಿಸ್ ವಾಹನ ಬ್ಯಾಡ್ಜ್ ಹಾಗೂ ಕಡ್ಡಾಯ ಪೊಲೀಸ್ ಪರಿಶೀಲನೆ ಹೊಂದಿರಬೇಕು.
ಸರ್ಕಾರದ ಅಂಕಿಅಂಶಗಳ ಪ್ರಕಾರ, 2025ರ ಏಪ್ರಿಲ್‌ನಿಂದ 2026ರ ಮೇ ಅವಧಿಯಲ್ಲಿ 1,000ಕ್ಕೂ ಹೆಚ್ಚು ಅಕ್ರಮ ವಾಣಿಜ್ಯ ವಾಹನಗಳ ವಿರುದ್ಧ ಕ್ರಮ ಕೈಗೊಂಡು ₹18.5 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ಹೊಸ ನಿಯಮದಿಂದ ಅಕ್ರಮ ಸಾರಿಗೆ ಸೇವೆಗಳ ಮೇಲೆ ನಿಯಂತ್ರಣ ಸಾಧಿಸುವುದರ ಜೊತೆಗೆ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಗುರಿಯನ್ನೂ ಸರ್ಕಾರ ಹೊಂದಿದೆ.

