ನವದೆಹಲಿ: ಒಂದೊಂದೇ ರಾಜ್ಯದಲ್ಲಿ ತನ್ನ ವ್ಯಾಪ್ತಿ ವಿಸ್ತರಿಸುತ್ತ ಸಾಗುತ್ತಿರುವ ಬಿಜೆಪಿಗೆ ನಾಳೆ ಮತ್ತೊಂದು ಸ್ಟಾರ್ ಶೈನ್ ಸೇರ್ಪಡೆಯಾಗಲಿದ್ದು ತೆಲಂಗಾಣದಲ್ಲಿ ಬಿಜೆಪಿ ಬಲ ಹೆಚ್ಚಿಸಲಿದೆ.

ಸಿನಿಮಾ ಕ್ಷೇತ್ರದ ಲೇಡಿ ಟೈಗರ್, ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ವಿಜಯ್ ಶಾಂತಿ ನಾಳೆ ನವದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ.

ಬಳಿಕ ಬಿಜೆಪಿಯ ಹಲವು ಹಿರಿಯ ನಾಯಕರನ್ನು ಭೇಟಿ ಮಾಡಲಿರುವ ವಿಜಯ ಶಾಂತಿ ಹಲವು ವಿಚಾರದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ನಾಯಕಿಯಾಗಿದ್ದ ವಿಜಯ್ ಶಾಂತಿ ಇತ್ತೀಚಿಗಷ್ಟೇ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದರು. ಇದೀಗ ಅವರ ಮುಂದಿನ ರಾಜಕೀಯ ಹಾದಿ ಸ್ಪಷ್ಟ ವಾಗಿದ್ದು ವಿಜಯ್ ಶಾಂತಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ.

ಪಕ್ಷದ ಸಿದ್ಧಾಂತ ಹಾಗೂ ಮೋದಿಯವರ ಆಡಳಿತದಿಂದ ಪ್ರೇರಿತರಾಗಿ ಬಿಜೆಪಿ ಜೊತೆ ಕೈಜೋಡಿಸುತ್ತಿರುವುದಾಗಿ ವಿಜಯ್ ಶಾಂತಿ ಹೇಳಿದ್ದಾರೆ. ಬಿಜೆಪಿಯ ಚುನಾವಣೆ ಪ್ರಚಾರ ಸೇರಿದಂತೆ ಎಲ್ಲ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ವಿಜಯ್ ಶಾಂತಿ ಹೇಳಿದ್ದಾರೆ.

ಬಹುಭಾಷಾ ನಟಿಯಾಗಿ ಕೆರಿಯರ್ ಆರಂಭಿಸಿದ ವಿಜಯ್ ಶಾಂತಿ ಕನ್ನಡ, ತೆಲುಗು, ತಮಿಳು, ಮಲಯಾಳಂ ,ಹಿಂದಿಯಲ್ಲಿ ೧೮೦ ೧೮೦ ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ. ದೇಶಭಕ್ತಿ, ಪೊಲೀಸ್ ಪಾತ್ರ ಸೇರಿದಂತೆ ಸಾಹಸಮಯ ಪಾತ್ರಗಳಲ್ಲಿನ ನಟನೆಗೆ ಅವರು ಹಲವು ಪ್ರಶಸ್ತಿ ಪಡೆದಿದ್ದಾರೆ .