ಮಾದಕ ಚೆಲುವೆಯಿಂದಲೇ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ನಟಿ ಅನಿತಾ ಭಟ್ ಕೊರೋನಾ ಬಳಿಕ ಸಖತ್ ಬ್ಯುಸಿಯಾಗಿದ್ದು, ಕನ್ನಡದ ಸಾಲು-ಸಾಲು ಚಿತ್ರಗಳ ಜೊತೆ ಇದೀಗ ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸೈಕೋ ಬೆಡಗಿ ಕೃಷ್ಣ ಲಂಕೆಯ ಸುಂದರಿಯಾಗಲಿದ್ದಾರೆ.

ಮೊನ್ನೆಯಷ್ಟೇ ಬಳೆಪೇಟೆ ಟೀಸರ್ ನಲ್ಲಿ ಸದ್ದು ಮಾಡಿದ ಕನ್ನಡದ ಮಾದಕ ಚೆಲುವೆ ಅನಿತಾ ಭಟ್ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಗ್ಲಾಮರ್ ಜೊತೆಗೆ ಎಲ್ಲಾ ರೀತಿಯ ಪಾತ್ರಗಳಿಗೂ ಸೈ ಎನಿಸಿಕೊಂಡಿರೋ ಅನಿತಾ ಭಟ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಅನಿತಾ ಭಟ್ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಟಾಲಿವುಡ್ ನಲ್ಲೂ ರೌಡಿಸಂ ಹಿನ್ನಲೆ ಹೊಂದಿರುವ ಚಿತ್ರವೊಂದರಲ್ಲಿ ನಟಿಸಲಿದ್ದಾರೆ.

ಟಾಲಿವುಡ್ ನ ಕೃಷ್ಣಲಂಕಾ ಎಂಬ ಸಿನಿಮಾದ ಮುಖ್ಯ ಪಾತ್ರದಲ್ಲಿ ಅನಿತಾ ಭಟ್ ನಟಿಸಲಿದ್ದು, ಈ ಚಿತ್ರದಲ್ಲಿ ಪರಚೂರು ರವಿ ನಾಯಕರಾಗಿದ್ದು, ಕಾರ್ತಿಕೇಯನ್ ನಿರ್ದೇಶನದಲ್ಲಿ ಚಿತ್ರ ಮೂಡಿಬರಲಿದೆ. ಕೃಷ್ಣಲಂಕಾದಲ್ಲಿ ಅನಿತಾಗೆ ಮುಖ್ಯಪಾತ್ರವಿದ್ದು, ಒಳ್ಳೆಯ ಸ್ಕೋಪ್ ಇರೋದರಿಂದ ಅನಿತಾ ನಟಿಸಲು ಒಪ್ಪಿಕೊಂಡಿದ್ದಾರಂತೆ.

ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಫೆಬ್ರವರಿಯಿಂದ ಪೂರ್ಣ ಪ್ರಮಾಣದ ಚಿತ್ರೀಕರಣದಲ್ಲಿ ಅನಿತಾ ಭಟ್ ಭಾಗವಹಿಸಲಿದ್ದಾರಂತೆ.

ಕನ್ನಡದಲ್ಲಿ ಬಳೆಪೇಟೆ, ಬೆಂಗಳೂರು-69 ಸೇರಿದಂತೆ ಹಲವು ಚಿತ್ರದಲ್ಲಿ ನಟಿಸುತ್ತಿರುವ ಅನಿತಾ ಭಟ್ ಟಾಲಿವುಡ್ ನಲ್ಲೂ ಮಿಂಚಲು ಸಿದ್ಧವಾಗಿದ್ದಾರೆ.

ಟಗರು ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ ಅನಿತಾ ಸೈಕೋ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದು, ಇದುವರೆಗೂ ಹಲವು ಚಿತ್ರದಲ್ಲಿ ನಟಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಅನಿತಾ ಭಟ್ ಕನ್ನಡದಲ್ಲಿ ಬೇರೆ ಭಾಷೆಯ ನಟಿಯರಿಗೆ ಅವಕಾಶ ನೀಡೋದರ ವಿರುದ್ಧ ಸದಾ ಧ್ವನಿ ಎತ್ತುತ್ತಿದ್ದರು. ಈಗ ಅವರೇ ಟಾಲಿವುಡ್ ಗೆ ಹಾರಿದ್ದಾರೆ.