ಬೆಂಗಳೂರು : ಕೊಲೆ, ಕೊಲೆಯತ್ನ, ಕಳವು ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿಶೀಟರ್ ಸ್ಲಂ ಭರತ ಪೊಲೀಸರ ಗುಂಡೇಟಿಗೆ ಹತ್ಯೆಯಾಗಿದ್ದಾನೆ. ಮುಂಜಾನೆ ಬೆಂಗಳೂರು ಹೆಸರುಘಟ್ಟ ಸಮೀಪದಲ್ಲಿ ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಲು ಯತ್ನಿಸೋ ವೇಳೆಯಲ್ಲಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಭರತ ಸಾವನ್ನಪ್ಪಿದ್ದಾನೆ.

ಬೆಂಗಳೂರಿನ ರಾಜಗೋಪಾಲನಗರ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ ಭರತ ಎರಡು ಕೊಲೆ, ಸುಲಿಗೆ, ಸುಫಾರಿ ಹತ್ಯೆ, ಕಳವು ಸೇರಿದಂತೆ ಸುಮಾರು 30ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಕಳೆದ 20 ದಿನಗಳ ಹಿಂದೆ ರಾಜಗೋಪಾಲನಗರ ಠಾಣೆಯ ಪೊಲೀಸರು ಗೆಳೆಯರ ಜೊತೆಯಲ್ಲಿ ಬರ್ತಡೇ ಪಾರ್ಟಿ ಆಚರಿಸೋ ವೇಳೆಯಲ್ಲಿ ಪೊಲೀಸರು ಸ್ಲಂ ಭರತನನ್ನು ಬಂಧಿಸೋದಕ್ಕೆ ತೆರಳಿದ್ದರು. ಈ ವೇಳೆಯಲ್ಲಿ ಭರತ ಹಾಗೂ ಆತನ ಸಹಚರರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ರೌಡಿಶೀಟರ್ ಭರತ್ ನ ಬೆನ್ನಿಗೆ ಬಿದ್ದ ರಾಜಗೋಪಾಲನಗರ ಠಾಣೆಯ ಪೊಲೀಸರು ಉತ್ತರ ಪ್ರದೇಶದ ಮುರ್ದಾಬಾದ್ ನಲ್ಲಿ ಅಡಗಿ ಕುಳಿತಿದ್ದ ಸ್ಲಂ ಭರತನನ್ನು ಕಳೆದೆರಡು ದಿನಗಳ ಹಿಂದೆಯಷ್ಟೇ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ರು.
ಇಂದು ಮುಂಜಾನೆ ಭರತನನ್ನು ಕೂರಿಸಿಕೊಂಡು ಪೊಲೀಸರು ಹೋಗುತ್ತಿದ್ದಾಗ ಪಿಣ್ಯಾದ ಎಸ್ ಆರ್ ಎಸ್ ರಸ್ತೆಯ ಬಳಿಯಲ್ಲಿ ಬರುತ್ತಿದ್ದಾಗ ಟಾಟಾ ಸುಮೋ ಹಾಗೂ ಬುಲೆಟ್ ನಲ್ಲಿ ಬಂದ ಭರತನ ಸಹಚರರು, ಸ್ಲಂ ಭರತನನ್ನು ಕೂರಿಸಿಕೊಂಡು ತೆರಳುತ್ತಿದ್ದ ಇನ್ನೋವಾ ಕಾರಿಗೆ ಅಡ್ಡಗಟ್ಟಿದ್ದಾರೆ. ನಂತರ ಭರತ್ ಕಾರಿನಿಂದ ಎಸ್ಕೇಪ್ ಆಗಿದ್ದ.

ಎಚ್ಚೆತ್ತುಕೊಂಡ ಪೊಲೀಸರು ಭರತ್ ಸಹಚರರನ್ನು ಹಿಂಬಾಲಿಸಿದ್ದಾರೆ. ಹೆಸರುಘಟ್ಟ ಬಳಿಗೆ ಬರ್ತಿದ್ದಂತೆಯೇ ಪೊಲೀಸರು ಭರತ್ ನ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಎದೆಗೆ ಗಂಭೀರವಾಗಿ ಗಾಯಗೊಂಡಿದ್ದ ಭರತ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.ಘಟನೆಯಲ್ಲಿ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ಪೇದೆ ಸುಭಾಶ್ ಗೂ ಗಂಭೀರಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮಿಳುನಾಡು ಮೂಲದ ರೌಡಿಶೀಟರ್ ಸ್ಲಂ ಭರತ 2007 ಮತ್ತು 2014ರಲ್ಲಿ ಎರಡು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಸುಮಾರು 200 ಮಂದಿ ಸಹಚರರನ್ನು ಹೊಂದಿದ್ದ ರೌಡಿಶೀಟರ್ ಸ್ಲಂ ಭರತ ನಟ ಯಶ್ ಸೇರಿದಂತೆ ಚಿತ್ರನಟರ ಹತ್ಯೆಗೂ ಸ್ಕೆಚ್ ಹಾಕಿದ್ದ. ಅಪರಾಧ ಕೃತ್ಯಗಳಿಂದಲೇ ಬೆಂಗಳೂರಲ್ಲಿ ದೊಡ್ಡಮಟ್ಟದ ಹೆಸರು ಮಾಡೋದಕ್ಕೆ ಪ್ಲ್ಯಾನ್ ರೂಪಿಸಿದ್ದ ಅನ್ನೋದು ಬಯಲಾಗಿದೆ.