ಮುಂಬೈ: ಬಾಲಿವುಡ್ ನ ವಿವಾದಾತ್ಮಕ ನಟಿ ಕಂಗನಾ ರನಾವುತ್ ಬಂಗ್ಲೆ ಬಳಿಕ ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಂಗ್ಲೆ ಮೇಲೆ ಬೃಹತ್ ಮುಂಬೈ ಮಹಾನಗರ ಪಾಲಿಕೆ ಕೆಂಗಣ್ಣು ಬೀರಿದ್ದು, ಬಿಗ್ ಬಿ ಪ್ರೀತಿಯ ಮನೆ ಪ್ರತೀಕ್ಷಾವನ್ನು ನೆಲಸಮ ಮಾಡಲು ಮುಂದಾಗಿದೆ.

ಮುಂಬೈನ ಜುಹು ಪ್ರದೇಶದಲ್ಲಿರುವ ಪ್ರತೀಕ್ಷಾ ಬಂಗ್ಲೆ ಬಿಗ್ ಬಿ ಅಮಿತಾಬ್ ಮೊದಲು ಖರೀದಿಸಿದ ಮನೆ. ಈ ಮನೆಯನ್ನು ರಸ್ತೆ ಅಗಲೀಕರಣದ ಕಾರಣಕ್ಕಾಗಿ ಒಂದು ಭಾಗವನ್ನು ನೆಲಸಮ ಮಾಡಲು ಬಿಎಂಸಿ ನಿರ್ಧರಿಸಿದೆ.

2017 ರಲ್ಲಿಯೇ ರಸ್ತೆ ಅಗಲೀಕರಣ ಮಾಡುವುದಕ್ಕಾಗಿ ಈ ಬಂಗ್ಲೆಯ ಒಂದು ಭಾಗವನ್ನು ನೆಲಸಮ ಮಾಡುವುದಾಗಿ ಬಿಎಂಸಿ ಅಮಿತಾಬ್ ಬಚ್ಚನ್ ಗೆ ನೊಟೀಸ್ ಜಾರಿ ಮಾಡಿತ್ತು. ಆಗ ರಸ್ತೆ ಅಗಲೀಕರಣ ಮಾಡದೇ ಯೋಜನೆ ಕೈಬಿಟ್ಟಿದ್ದ ಬಿಎಂಸಿ ಈ ಬಗ್ಗೆ ಮತ್ತೆ ಆರಂಭಿಸಲಿದೆ.

ಕೇವಲ ಅಮಿತಾಬ್ ಬಚ್ಚನ್ ಮಾತ್ರವಲ್ಲದೇ, ನಿರ್ದೇಶಕ ರಾಜ್ ಕುಮಾರ ಹೀರಾನಿ, ಪಂಕಜ್ ಬಾಲಾಜಿ ಸೇರಿದಂತೆ 7 ಸೆಲೆಬ್ರೆಟಿಗಳ ಮನೆ ಈ ರಸ್ತೆ ಅಗಲೀಕರಣದಲ್ಲಿ ನೆಲಕಾಣಲಿದೆ. 2017 ರ ನೊಟೀಸ್ ನಂತೆ ಬಿಎಂಸಿ ಈಗ ಕಾಮಗಾರಿ ಆರಂಭಿಸಲಿದೆ.

2020 ರಲ್ಲಿ ಬಿಎಂಸಿ ನಟಿ ಕಂಗನಾ ರನಾವುತ್ ಕಚೇರಿ ಹಾಗೂ ಮನೆ ನೆಲಸಮ ಮಾಡಲು ಪ್ರಯತ್ನಿಸಿತ್ತು. ಆ ಬಳಿಕ ಕಂಗನಾ ಹೈಕೋರ್ಟ್ ಮೊರೆ ಹೋದಿದ್ದರಿಂದ ಕಾಮಗಾರಿಯನ್ನು ಬಿಎಂಸಿ ಅರ್ಧಕ್ಕೆ ನಿಲ್ಲಿಸಿತ್ತು.

ಆದರೆ ಬಿಎಂಸಿ ಈ ಕ್ರಮದ ಬಗ್ಗೆ ಇದುವರೆಗೂ ಬಿಗ್ ಬಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಕನ್ನಡತಿ ರಶ್ಮಿಕಾ ಕೂಡಾ ನಟಿಸುತ್ತಿರುವ ಗುಡ್ ಬೈ ಸಿನಿಮಾದಲ್ಲಿ ಬಿಗ್ ಬಿ ಬ್ಯುಸಿಯಾಗಿದ್ದಾರೆ.