HDK: ಕೆಆರ್.ಎಸ್ ಆಣೆಕಟ್ಟಿನ ಬಾಗಿಲಿಗೆ ಸಂಸದರನ್ನೇ ಮಲಗಿಸಿ….! ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಮಾಜಿಸಿಎಂ ಎಚ್ಡಿಕೆ…!!

ಮಂಡ್ಯ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ತೋರುವ ಮಾಜಿಸಿಎಂ ಕುಮಾರಸ್ವಾಮಿಗೆ ಮಂಡ್ಯ ಲೋಕಸಭಾ ಚುನಾವಣೆ ಸೋಲನ್ನು ಮರೆಯೋದು ಸಾಧ್ಯವೇ ಆದಂತಿಲ್ಲ. ಹೀಗಾಗಿ ಅವಕಾಶ ಸಿಕ್ಕಾಗಲೆಲ್ಲ ಮಂಡ್ಯ ಸಂಸದರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿರುವ ಕುಮಾರಸ್ವಾಮಿ ಆಣೆಕಟ್ಟಿನ ಬಾಗಿಲಿಗೆ ಸಂಸದರನ್ನು ಮಲಗಿಸಿ ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.

ಮಂಡ್ಯದ ಮನ್ಮುಲ್ ಅವ್ಯವಹಾರ , ಮೈಶುಗರ್ ಕಂಪನಿ ಖಾಸಗಿಕರಣ ವಿಚಾರ ಸೇರಿದಂತೆ ಮಂಡ್ಯ ಅಭಿವೃದ್ಧಿಯ ವಿವಿಧ ಯೋಜನೆಗಳ ವಿಚಾರ ಮುಂದಿಟ್ಟುಕೊಂಡು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇಂದು ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್ವೈ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಈ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ಮಾಜಿ ಸಿಎಂ ಎಚ್ಡಿಕೆಯವರಿಗೆ ಮಾಧ್ಯಮಗಳ ಕೆಆರ್ಎಸ್ ಜಲಾಶಯ ಬಿರುಕು ಬಿಟ್ಟಿದೆ ಎಂಬ ಸಂಸದರ ಹೇಳಿಕೆ ಕುರಿತು ಪ್ರಶ್ನೆ ಕೇಳಿದ್ದಾರೆ. ಸಂಸದರ ಹೆಸರು ಕೇಳುತ್ತಿದ್ದಂತೆ ಕೆರಳಿದ ಎಚ್.ಡಿ.ಕುಮಾರಸ್ವಾಮಿ, ಜಲಾಶಯದ ಬಾಗಿಲಲ್ಲಿ ನೀರು ಹೋಗದಂತೆ ಸಂಸದರನ್ನೇ ಮಲಗಿಸಿ ಬಿಟ್ರೆ ಆಯ್ತಲ್ಲ ಎನ್ನುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ.

ಸಂಸದೆ ಸುಮಲತಾ ಹೆಸರನ್ನು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ ಎಚ್ಡಿಕೆ, ಮಂಡ್ಯಕ್ಕೆ ಹಿಂದೆಂದೂ ಇಂಥ ಸಂಸದರು ಸಿಕ್ಕಿಲ್ಲ. ಮುಂದೇ ಸಿಗೋದಿಲ್ಲ. ವೈಯಕ್ತಿಕ ವಿಚಾರಕ್ಕೆ ಟೀಕೆ ಮಾಡಬಾರದು. ಆದರೆ ಜನರು ಕೊಟ್ಟ ಅಧಿಕಾರ ಸದುಪಯೋಗ ಪಡಿಸಿಕೊಳ್ಳದಿದ್ದರೇ, ಜನರೇ ಮುಂದೇ ಬುದ್ಧಿ ಕಲಿಸುತ್ತಾರೆ ಎಂದು ಟೀಕಿಸಿದ್ದಾರೆ.

ಆದರೆ ಜಲಾಶಯದ ಬಾಗಿಲಿಗೆ ಸಂಸದರನ್ನು ಮಲಗಿಸಿ ಎಂಬ ಕುಮಾರಸ್ವಾಮಿಯವರ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮಹಿಳಾ ಸಂಸದರ ಬಗ್ಗೆ ಮಾಜಿಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಈ ರೀತಿ ಮಾತನಾಡುವುದು ತರವಲ್ಲ. ಘನತೆ ಹಾಗೂ ಗೌರವದಿಂದ ಮಾತನಾಡಬೇಕೆನ್ನುವ ಆಗ್ರಹ ವ್ಯಕ್ತವಾಗಿದೆ.

ಈ ಹಿಂದೆಯೂ ರೈತ ಮಹಿಳೆಯೊರ್ವಳಿಗೆ ಇಷ್ಟು ದಿನ ಎಲ್ಲಿ ಮಲಗಿದ್ದೇ ಎಂದು ಪ್ರಶ್ನಿಸುವ ಮೂಲಕ ಕುಮಾರಸ್ವಾಮಿ ವಿವಾದ ಸೃಷ್ಟಿಸಿದ್ದರು. ಅಷ್ಟೇ ಅಲ್ಲ ಮಂಡ್ಯ ಚುನಾವಣೆಗೆ ಸುಮಲತಾ ಅಂಬರೀಶ್ ಸ್ಪರ್ಧಿಸಿದ ವೇಳೆ ಗಂಡ ಸತ್ತೋರಿಗೆಲ್ಲ ಚುನಾವಣೆ ಯಾಕೆ ಎನ್ನುವ ಮೂಲಕ ಎಚ್ಡಿಕೆ ಸಹೋದರ ಎಚ್.ಡಿ.ರೇವಣ್ಣ ಕೂಡ ವಿವಾದ ಎಬ್ಬಿಸಿದ್ದರು.

ಮಂಡ್ಯ ಚುನಾವಣೆಯಲ್ಲಿ ಎಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿದ್ದ ಸುಮಲತಾ ಗೆಲುವು ಸಾಧಿಸಿದ್ದರಿಂದ ಕುಮಾರಸ್ವಾಮಿ ತೀವ್ರ ಮುಖಭಂಗ ಅನುಭವಿಸಿದ್ದು, ಅಂದಿನಿಂದ ಸುಮಲತಾ ವಿರುದ್ಧ ಆಕ್ರೋಶ ,ಟೀಕೆ ವ್ಯಕ್ತಪಡಿಸುತ್ತಲೇ ಇದ್ದಾರೆ.  

Comments are closed.