HDK-BSY: ಹಾಲಿ ಸಿಎಂ ಭೇಟಿ ಮಾಡಿದ ಮಾಜಿ ಸಿಎಂ…! ಕುತೂಹಲ ಮೂಡಿಸಿದ ಎಚ್ಡಿಕೆ-ಬಿಎಸ್ವೈ ಮಾತುಕತೆ…!!

ಬೆಂಗಳೂರು: ಸದಾಕಾಲ ಬಿಎಸ್ವೈ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಹಾಲಿ ಸಿಎಂ ಬಿಎಸ್ವೈ ಭೇಟಿ ನಡೆಸಿ ಮಾತುಕತೆ ನಡೆಸಿದ್ದು, ಈ ಭೇಟಿ ಹಾಗೂ ಮಾತುಕತೆ ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.

ಸೋಮವಾರ ಮುಂಜಾನೆಯೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿ ಸಿಎಂ ಬಿಎಸ್ವೈ ರನ್ನು ಭೇಟಿ ಮಾಡಿದ್ದಾರೆ. ಅಂದಾಜು ಒಂದು ಗಂಟೆಗೂ ಅಧಿಕ ಕಾಲ ಬಿಎಸ್ವೈ ಹಾಗೂ ಎಚ್ಡಿಕೆ ಮಾತುಕತೆ ನಡೆಸಿದ್ದಾರೆ.

ಮಂಡ್ಯ ಮೈಶುಗರ್ ಕಂಪನಿ ಖಾಸಗಿಕರಣಕ್ಕೆ ವಿರೋಧ , ಮನ್ಮುಲ್ ಹಗರಣ ಸೇರಿದಂತೆ ಹಲವು ವಿಚಾರಗಳ ಕುರಿತು ಎಚ್ಡಿಕೆ ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ತಾ.ಪಂ ಹಾಗೂ ಜಿಪಂ ಮೀಸಲಾತಿ ಕುರಿತು ಮಾತುಕತೆ ನಡೆಸಿದ್ದಾರಂತೆ.

ಆದರೆ ಹಾಲಿ ಮತ್ತು ಮಾಜಿ ಸಿಎಂ ಗಳು ನಡುವೆ ಯಾವುದೇ ರಾಜಕೀಯ ಮಾತುಕತೆ ನಡೆದಿಲ್ಲ ಎನ್ನಲಾಗಿದೆ.  ಈ ಭೇಟಿ ವೇಳೆ ಶಾಸಕ ಸಿ.ಎಸ್.ಪುಟ್ಟರಾಜು, ಶ್ರೀನಿವಾಸ್ ಮಳವಳ್ಳಿ ಶಾಸಕ ಅನ್ನದಾನಿ ಕೂಡ ಜೊತೆಗಿದ್ದರು.

ಇದಲ್ಲದೇ ಮಂಡ್ಯ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳ ಕುರಿತು ಶಾಸಕರು ಹಾಗೂಸಿಎಂ ಜೊತೆ ಎಚ್ಡಿಕೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಪ್ರಸಕ್ತ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೇ ಸಿದ್ಧತೆ ನಡೆದಿದೆ ಎಂಬಂಥ ರಾಜಕೀಯ ಸ್ಥಿತಿ ಎದುರಾಗಿರುವ ಹೊತ್ತಿನಲ್ಲಿ ಸಿಎಂ ಬಿಎಸ್ವೈ ಹಾಗೂ ಎಚ್ಡಿಕೆ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

Comments are closed.