ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್1ಎನ್1 ಮಹಾಮಾರಿ ತನ್ನ ಅಟ್ಟಹಾಸ ಮೆರೆದಿದೆ. ಕಡಬ ತಾಲೂಕಿನ ಕಲ್ಪುರೆ ನಿವಾಸಿ ಆಟೋ ಚಾಲಕ ಕುಶಾನಪ್ಪ ಗೌಡ ಶಂಕಿತ ಎಚ್1ಎನ್1 ಗೆ ಬಲಿಯಾಗಿದ್ದಾರೆ.

ಕಳೆದ 20 ವರ್ಷಗಳಿಂದಲೂ ಜ್ವರ ಪೀಡಿತರಾಗಿದ್ದ ಕುಶಾಲಪ್ಪ ಅವರನ್ನು ಕಾಣಿಯೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದರೂ ಜ್ವರ ಕಡಿಮೆಯಾಗಿರಲಿಲ್ಲ. ಹೀಗಾಗಿ ಮಂಗಳೂರಿನ ದೇರಣಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೀಗ ಕುಶಾಲಪ್ಪ ಗೌಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕುಶಾಲಪ್ಪ ಗೌಡರು ಎಚ್1ಎನ್1 ಗೆ ಬಲಿಯಾಗಿದ್ದಾರೆನ್ನುವ ಸುದ್ದಿ ಹರಡಿದ್ದು, ಖಾಸಗಿ ಆಸ್ಪತ್ರೆಯ ವೈದ್ಯರು ಕೂಡ ಎಚ್1ಎನ್1 ನಿಂದಲೇ ಸಾವು ಸಂಭವಿಸಿದೆ ಎಂದಿದ್ದಾರೆ. ಹೀಗಾಗಿ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಆದರೆ ಜಿಲ್ಲಾ ವೈದ್ಯಾಧಿಕಾರಿಗಳು ಮಾತ್ರ ಕುಶಾಲಪ್ಪ ಗೌಡ ನ್ಯೂಮೋನಿಯಾದಿಂದ ಜ್ವರ ಪಟ್ಟಿದ್ದಾರೆ ಎನ್ನುತ್ತಿದ್ದಾರೆ. ನ್ಯೂಮೋನಿಯಾದಲ್ಲಿಯೂ ಎಚ್1ಎನ್1 ಜ್ವರದ ಗುಣ ಲಕ್ಷಣಗಳು ಕಂಡುಬರುತ್ತಿರುವುದರಿಂದ ಗೊಂದಲ ಉಂಟಾಗಿದೆ. ಜನರು ಭಯ ಪಡುವುದರು ಬೇಡ ಅಂತಿದ್ದಾರೆ. ಆದರೆ ಜಿಲ್ಲಾ ಆರೋಗ್ಯ ಇಲಾಖೆ ಎಚ್1ಎನ್1 ಜ್ವರದ ಕುರಿತು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಈ ಹಿಂದೆ ಕೋಡಿಂಬಾಳದ ಮಡ್ಯಡ್ಕ, ಮಜ್ಜಾರು, ಪ್ರದೇಶಗಳಲ್ಲಿ ಜ್ವರದಿಂದ ಕೆಲವು ಮಂದಿ ಮೃತಪಟ್ಟಿದ್ದರು. ಇದರ ಬಗ್ಗೆ ಆರೋಗ್ಯ ಇಲಾಖೆ ಇನ್ನೂ ಅಧಿಕೃತವಾಗಿ ಈ ಪರಿಸರದ ಜನರ ಆತಂಕ ನಿವಾರಿಸುವ ಕೆಲಸ ಮಾಡಲು ಮುಂದಾಗಿಲ್ಲ ಎಂದು ಸ್ಧಳೀಯರು ಆರೋಪಿಸಿದ್ದಾರೆ.