ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ಹಿನ್ನೆಲೆ ಕರ್ನಾಟಕ ಕಳೆದ 15 ದಿನಗಳಿಂದಲೂ ಬಹುತೇಕ ಬಂದ್ ಆಗಿದೆ. ಇದೀಗ ದೇಶದಾದ್ಯಂತ ಇಂದು ಜನತಾ ಕರ್ಪ್ಯೂ ಆಚರಿಸಲಾಗುತ್ತಿದೆ. ಆದ್ರೆ ಈ ನಡುವಲ್ಲೇ ಕರ್ನಾಟಕದಲ್ಲಿ ಇನ್ನೆರಡು ದಿನಗಳಲ್ಲಿ ಲಾಕ್ ಡೌನ್ ಆಗೋದು ಬಹುತೇಕ ಖಚಿತ !

ಚೀನಾ, ಇಟಲಿ, ಇರಾನ್ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಕೊರೊನಾ ಭೀಕರತೆ ಹೆಚ್ಚಾಗುತ್ತಿದ್ರೂ ಕರ್ನಾಟಕ ಸರಕಾರ ಮೌನವಹಿಸಿತ್ತು. ಆದ್ರೆ ರಾಜ್ಯದಲ್ಲಿ ಕೊರೊನಾಕ್ಕೆ ವೃದ್ದ ಬಲಿಯಾಗುತ್ತಲೇ ಗಾಢನಿದ್ದೆಯಿಂದ ಎದ್ದಿತ್ತು. ಸರಕಾರ ವೈಫಲ್ಯದಲ್ಲಿ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 20ಕ್ಕೆ ತಲುಪಿದೆ. ಕೊರೊನಾ ನಿಯಂತ್ರಣಕ್ಕೆ ಇದೀಗ ಹರಸಾಹಸ ಪಡುತ್ತಿದೆ. ಕರ್ನಾಟಕ ಕಳೆದ 15 ದಿನಗಳಿಂದಲೂ ಅಕ್ಷರಶಃ ಸ್ತಬ್ದವಾಗಿದೆ.

ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಖಾಸಗಿ ಸ್ವಾಮ್ಯದ ಕಂಪೆನಿಗಳ ನೌಕರರು ವರ್ಕಪ್ರಂ ಹೋಮ್ ಮಾಡುತ್ತಿದ್ದಾರೆ. ಸರಕಾರಿ ನೌಕರರು ಮಾತ್ರ ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಹೊರಡಿಸಿ ದೇವಸ್ಥಾನಗಳಿಗೆ ಬೀಗ ಜಡಿಯಲಾಗಿದೆ. ಜನ ಮನೆಯಿಂದ ಹೊರ ಬರಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ 15 ದಿನಗಳಿಂದಲೂ ರಾಜ್ಯದಲ್ಲಿ ಬಂದ್ ವಾತಾವರಣವಿದೆ. ಆದ್ರೆ ಕೊರೊನಾ ಕುರಿತು ತಜ್ಞರು ನೀಡಿರೋ ವರದಿ ರಾಜ್ಯ ಸರಕಾರವನ್ನೇ ಬೆಚ್ಚಿಬೀಳಿಸಿದೆ.

ಚೀನಾದಲ್ಲಿ ಆರಂಭಗೊಂಡಿರೋ ಕೊರೊನಾ ವೈರಸ್ ವಿಶ್ವದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ದೊಡ್ಡಣ್ಣ ಅಮೇರಿಕಾ, ಆಸ್ಟ್ರೇಲಿಯಾ, ಫ್ರಾನ್ಸ್, ಭಾರತ ಸೇರಿದಂತೆ ಹಲವು ರಾಷ್ಟ್ರಗಳು ತತ್ತರಿಸಿ ಹೋಗಿವೆ. ವಿಶ್ವದಾದ್ಯಂತ ಕೊರೊನಾ ಮಹಾಮಾರಿಯ ವಿರುದ್ದ ಸಮರ ಸಾರಿರೋ ರಾಷ್ಟ್ರಗಳು ಸಂಪೂರ್ಣವಾಗಿ ಬಂದ್ ಆಚರಿಸುತ್ತಿವೆ. ಆದರೆ ಉತ್ತರ ಕೋರಿಯಾದಲ್ಲಿ ಕೊರೊನಾ ವಿರುದ್ದ ತೊಡೆತಟ್ಟಿದ್ದು, ಸಂಪೂರ್ಣವಾಗಿ ಲಾಕ್ ಡೌನ್ ಮಾಡಿದೆ. ಜನರನ್ನು ಮನೆಗಳಲ್ಲಿಯೇ ಬಂಧಿಯನ್ನಾಗಿಸಿದೆ. ಹೀಗಾಗಿಯೇ ಉತ್ತರ ಕೋರಿಯಾದಲ್ಲಿ ಲಾಕ್ ಡೌನ್ ವರ್ಕೌಟ್ ಆಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಇದೇ ಉದ್ದೇಶವನ್ನೇ ಇಟ್ಟುಕೊಂಡು ಒಂದು ದಿನ ಜನತಾ ಕರ್ಪ್ಯೂಗೆ ಮನವಿ ಮಾಡಿದ್ದಾರೆ.

ಆದರೆ ಕರ್ನಾಟಕದಲ್ಲಿ ದಿನಕ್ಕೊಂದರಂತೆ ಕೊರೊನಾ ಪ್ರಕರಣ ಹೆಚ್ಚುತ್ತಿದೆ. ಶಂಕಿತರ ಸಂಖ್ಯೆಯ ಜಾಸ್ತಿಯಾಗುತ್ತಿದೆ. ಇನ್ನೊಂದೆಡೆ ಹಲವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೂ ಕೂಡ ತಪಾಸಣೆಗೆ ಒಳಪಟ್ಟಿಲ್ಲ. ಒಂದೊಮ್ಮೆ ಎಲ್ಲರೂ ತಪಾಸಣೆಗೆ ಒಳಪಟ್ರೆ ಸೋಂಕಿತರ ಸಂಖ್ಯೆ ದುಪ್ಪಟ್ಟಾಗೋ ಸಾಧ್ಯತೆಯೂ ಇದೆ. ಈ ನಡುವಲ್ಲೇ ಕೊರೊನಾ ಕುರಿತು ಸಂಪೂರ್ಣ ರಾಜ್ಯವನ್ನೇ 2 ವಾರಗಳ ಕಾಲ ಲಾಕ್ ಡೌನ್ ಮಾಡಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಂಪೂರ್ಣವಾಗಿ ಜನರನ್ನು ಮನೆಯಲ್ಲಿಯೇ ಬಂಧಿಯನ್ನಾಗಿಸಬೇಕು. ವಾಹನ, ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಬಂದ್ ಮಾಡದ ಹೊರತು ಕೊರೊನಾ ನಿಯಂತ್ರಣ ಸಾಧ್ಯವಿಲ್ಲ ಅನ್ನೋ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಎರಡು ವಾರಗಳ ಕಾಲ ಲಾಕ್ ಡೌನ್ ಮಾಡೋ ಸಾಧ್ಯತೆಯಿದೆ.

ವಿದೇಶಗಳಿಂದ ಸ್ವದೇಶಕ್ಕೆ ಮರಳಿರೋ ಕೆಲವರು ತಪಾಸಣೆಗೆ ಒಳಪಟ್ಟಿದ್ರೆ, ಇನ್ನೂ ಹಲವರು ತಪಾಸಣೆಗೆ ಒಳಪಟ್ಟಿಲ್ಲಾ ಅನ್ನೋ ಮಾಹಿತಿಯಿದೆ. ರಾಜ್ಯ ಸರಕಾರ ಕಳೆದೊಂದು ತಿಂಗಳ ಅವಧಿಯಲ್ಲಿ ರಾಜ್ಯಕ್ಕೆ ವಿದೇಶಗಳಿಂದ ಮರಳಿರೋ ಎಲ್ಲರನ್ನೂ ತಪಾಸಣೆಗೆ ಒಳಪಡಿಸಿಲ್ಲ.

ಒಂದೊಮ್ಮೆ ವಿದೇಶಿಯರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಿದ್ರೆ ಕೊರೊನಾ ನಿಯಂತ್ರಣ ಮಾಡಬಹುದಾಗಿತ್ತು. ಆದರೆ ರಾಜ್ಯ ಆರೋಗ್ಯ ಇಲಾಖೆ ಗಾಢನಿದ್ದೆಯಿಂದ ಎದ್ದೇಳೋದಕ್ಕೆ ಬಹಳ ಸಮಯ ಬೇಕಾಗಿತ್ತು. ಇದೀಗ ವಿದೇಶದಿಂದ ಬಂದವರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸೋ ಕಾರ್ಯವನ್ನು ರಾಜ್ಯ ಸರಕಾರ ಮಾಡಲೇಬೇಕಿದೆ.

ಕಳೆದ ವಾರವೇ ಕರ್ನಾಟಕ ಲಾಕ್ ಡೌನ್ ಆಗುತ್ತೇ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಾಕ್ ಡೌನ್ ಮಾಡೋದಕ್ಕೆ ಮನಸ್ಸು ಮಾಡಿರಲಿಲ್ಲ. ಆದ್ರೀಗ ತಜ್ಞರ ವರದಿಯಿಂದ ಬೆಚ್ಚಿಬಿದ್ದಿರೋ ಸರಕಾರ ಲಾಕ್ ಡೌನ್ ಮಾಡಲೇ ಬೇಕಾದ ಅನಿವಾರ್ಯತೆಯಿದ್ದು, ಇನ್ನೆರಡು ದಿನಗಳಲ್ಲಿ ಸರಕಾರ ಈ ಕುರಿತು ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗುತ್ತಿದೆ.