ನವದೆಹಲಿ : ದೇಶದಾದ್ಯಂತ ಕೋರೊನಾ ಸೋಂಕಿತರ ಪ್ರಕರಣ ಹೆಚ್ಚುತ್ತಲೇ ಇದೆ. ಇಂದು ಒಂದೇ ದಿನ ಬರೋಬ್ಬರಿ 601 ಹೊಸ ಪ್ರಕರಣ ದಾಖಲಾಗಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,229ಕ್ಕೆ ಏರಿಕೆಯಾಗಿದೆ.

17 ರಾಜ್ಯಗಳಲ್ಲಿ ಕಾಣಿಸಿಕೊಂಡಿರೊ ಕೊರೊನಾ ಸೋಂಕಿತ ಪ್ರಕರಣಗಳಲ್ಲಿ 1,023 ಮಂದಿ ಕೊರೊನಾ ಸೋಂಕಿತರಿಗೆ ತಬ್ಲಿಘಿ ಜಮಾತ್ ನಂಟಿದೆ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದು, ಶೇ.30ರಷ್ಟು ಪ್ರಕರಣಗಳು ಒಂದೇ ಪ್ರದೇಶಕ್ಕೆ ಸಂಬಂಧಿಸಿದ್ದಾಗಿದೆ.
ಇನ್ನು ಸೋಂಕಿತರಲ್ಲಿ 21-40 ವರ್ಷದೊಳಗಿನವರೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಶೇ. 42ರಷ್ಟು ಮಂದಿ 21-40 ವರ್ಷದವರೇ ಆಗಿದ್ದಾರೆ. ಇನ್ನು ಶೇ. 33ರಷ್ಟು ಮಂದಿ 41-60 ವರ್ಷದವರಾಗಿದ್ರೆ, ಶೇ. 17ರಷ್ಟು ಮಂದಿ 60 ವರ್ಷ ಮೆಲ್ಪಟ್ಟವರು ಹಾಗೂ ಉಳಿದ ಶೇ. 9ರಷ್ಟು ರೋಗಿಗಳು 0-20 ವರ್ಷದವರಾಗಿದ್ದಾರೆ.

ದೇಶದಲ್ಲಿ ಅತೀ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದ್ದು, ಮಹಾರಾಷ್ಟ್ರದಲ್ಲಿ ಇದುವರೆಗೆ 537 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 26 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 411 ಮಂದಿಗೆ ಸೋಂಕು ಧೃಢಪಟ್ಟಿದ್ದು, 12 ಮಂದಿ ಬಲಿಯಾಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 386 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದುವರೆಗೆ 6 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನು ದೇವರನಾಡು ಕೇರಳವೂ ಡೆಡ್ಲಿ ಕೊರೊನಾ ಹೊಡೆತಕ್ಕೆ ತತ್ತರಿಸಿ ಹೋಗಿದೆ.

ಕೇರಳದಲ್ಲಿ 295 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು 2 ಸಾವನ್ನಪ್ಪಿದ್ದಾರೆ. ಕರ್ನಾಟಕ ರಾಜ್ಯದಲ್ಲಿಯೂ ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, ಇದುವರೆಗೆ 128 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 4 ಮಂದಿ ಕೊರೊನಾಕ್ಕೆ ಬಲಿಯಾಗಿದ್ರೆ, 11 ಮಂದಿ ಕೊರೊನಾ ಮಹಾಮಾರಿಯಿಂದ ಗೆದ್ದು ಬಂದಿದ್ದಾರ. ದೇಶದಲ್ಲಿ ಇದುವರೆಗೆ ಒಟ್ಟು 87 ಮಂದಿ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ.

ಈವರೆಗೆ ಭಾರತದಲ್ಲಿ 230 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ವಿಶ್ವಾದ್ಯಂತ 11,32,733 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 2,35,992 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 60,353 ಮಂದಿ ಮಹಾಮಾರಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.