ವಿಶಾಖಪಟ್ಟಣ : ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ವಿಷಾನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಮಂದಿ ಸಾವನ್ನಪ್ಪಿದ್ದು, 5000ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜನರಿಗೆ ಕೃತಕ ಆಮ್ಲಜನಕದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ ಕಾರ್ಖಾನೆಯಿಂದ 5 ಕಿ,ಮೀ. ವ್ಯಾಪ್ತಿಯ ಜನರಿಗೆ ಆತಂಕ ಶುರುವಾಗಿದೆ.

ಮುಂಜಾನೆ ಸುಮಾರು 3 ಗಂಟೆ ಹೊತ್ತಿನಲ್ಲಿ ವಿಶಾಖಪಟ್ಟಣಂನ ಗೋಪಾಲಪಟ್ಟಣದ, ನಾಯ್ಡು ತೋಟಾ ಸಮೀಪದ ಆರ್ ಆರ್ ವೆಂಕಟಪುರಂನಲ್ಲಿರುವ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಗಾಳಿಯಲ್ಲಿ ವಿಷಾನಿಲ ಸುತ್ತಮುತ್ತಲ ಪ್ರದೇಶಗಳಿಗೆ ಹರಡಿದೆ. ಪರಿಣಾಮ ಬೆಳಗ್ಗೆ ವಾಕಿಂಗ್ ಗೆ ಮತ್ತು ಇತರೆ ಕಾರ್ಯಗಳಿಗೆ ಬಂದವರು ವಿಷಾನಿಲವನ್ನು ಉಸಿರಾಡಿ ಕೂಡಲೇ ಅಸ್ವಸ್ಥರಾಗಿದ್ದಾರೆ. ಈ ದುರ್ಘಟನೆಯಲ್ಲಿ ಈ ವರೆಗೂ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ಇಬ್ಬರು ವೃದ್ಧರು, 7 ವರ್ಷದ ಬಾಲಕಿ ಸೇರಿದಂತೆ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಐದು ಮಂದಿ ಆಸ್ಪತ್ರೆಗೆ ಸೇರಿಸುವ ಮುನ್ನವೇ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.

ಅಸ್ವಸ್ಥರನ್ನು ವಿಶಾಖಪಟ್ಟದ ಕಿಂಗ್ ಜಾರ್ಜ್ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇದೊಂದು ಆಸ್ಪತ್ರೆಯಲ್ಲೇ ಸುಮಾರು 180ಕ್ಕೂ ಅಧಿಕ ಮಂದಿ ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿಷಾನಿಲ ಸೋರಿಕೆಯಿಂದಾಗಿ ಕಾರ್ಖಾನೆಯ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಯಾಗಿದ್ದು, ಗೋಪಾಲಪಟ್ಟಣಂ ಸುತ್ತಲಿನ ಐದು ಗ್ರಾಮಗಳಲ್ಲಿನ ಜನರಿಗೆ ಉಸಿರಾಟದ ತೊಂದರೆ ಮತ್ತು ಗಂಟಲು ಕೆರೆತ ಸಮಸ್ಯೆ ಆರಂಭವಾಗಿದೆ.

ನೂರಾರು ಮಂದಿ ಉಸಿರಾಟದ ಸಮಸ್ಯೆ, ಗಂಟಲು ನೋವು, ಕಣ್ಣಿನ ಉರಿ, ಹೊಟ್ಟೆ ನೋವು, ಇತರೆ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಸ್ವಸ್ಥರನ್ನು ಆಸ್ಪತ್ರೆಗೆ ರವಾನಿಸಲು ಇದೀಗ ಆ್ಯಂಬುಲೆನ್ಸ್ ಗಳನ್ನು ಮತ್ತು ಸರ್ಕಾರಿ ಸಾರಿಗೆ ಬಸ್ ಗಳನ್ನು ಕೂಡ ನಿಯೋಜನೆ ಮಾಡಲಾಗಿದೆ.

ಘಟನಾ ಸ್ಥಳಕ್ಕೆ ವಿಶಾಖಪಟ್ಟಣಂ ಜಿಲ್ಲಾಧಿಕಾರಿ ವಿ ವಿನಯ್ ಚಾಂದ್ ಅವರು ದೌಡಾಯಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು 2 ಗಂಟೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದ್ದು, ಅಸ್ವಸ್ಥರೆಲ್ಲರನ್ನೂ ಆಸ್ಪತ್ರೆಗೆ ಸಾಗಿಸಲಾಗಿದೆ. ಅಂತೆಯೇ ಸ್ಥಳೀಯರನ್ನು ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿದೆ. ಉಸಿರಾಟದ ತೊಂದರೆ ಇರುವವರಿಗೆ ಕೃತಕ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ. ಅಸ್ವಸ್ಥರನ್ನು ಆಸ್ಪತ್ರೆಗೆ ಸಾಗಿಸಲು ರಾಷ್ಟ್ಪೀಯ ವಿಪತ್ತು ನಿರ್ವಹಣಾ ದಳ ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳಗಳನ್ನು ನಿಯೋಜಿಸಲಾಗಿದ್ದು,. ಇದೀಗ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.

ಕಾರ್ಖಾನೆಯಿಂದ ವಿಷಾನಿಲ ಸೋರಿಕೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ವಿಷಾನಿಲ ಸೋರಿಕೆಯಾಗಿರುವ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರಿ ಸಂಸ್ಥೆ 1961ರಲ್ಲಿ ನಿರ್ಮಾಣವಾಗಿತ್ತು. ಆರಂಭದಲ್ಲಿ ಇದು ಹಿಂದೂಸ್ತಾನ್ ಪಾಲಿಮರ್ಸ್ ಎಂದು ಹೆಸರಿತ್ತು. ಬಳಿಕ 1978ರಲ್ಲಿ ಮೆಕ್ ಡೊವೆಲ್ ಮತ್ತು ಕಂಪನಿ ಲಿಮಿಟೆಡ್ ಆಫ್ ಯುಬಿ ಸಮೂಹದೊಂದಿಗೆ ವಿಲೀನಗೊಂಡಿತ್ತು.

ಜನರ ಜೀವ ರಕ್ಷಣೆಗೆ ಅಗತ್ಯ ಕ್ರಮ ಸಿಎಂ ಜಗನ್ ಮೋಹನ್ ರೆಡ್ಡಿ

ವಿಶಾಖಪಟ್ಟಣ ವಿಷಾನಿಲ ಸೋರಿಕೆ ದುರಂತಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ, ಅಧಿಕಾರಿಗಳಿಂದ ದುರಂತಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದೇನೆ. ಅಂತೆಯೇ ಹೆಚ್ಚು ಜೀವ ಹಾನಿ ಸಂಭವಿಸದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಿ ಎಂದು ಸೂಚಿಸಿದ್ದೇನೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಕುರಿತು ನಿಗಾ ವಹಿಸಿದ್ದು, ಸಂತ್ರಸ್ಥರಿಗೆ ಎಲ್ಲ ರೀತಿಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದಾರೆ.
ಇನ್ನು ಪರಿಸ್ಥಿತಿ ನಿಯಂತ್ರಣಕ್ಕೆ ಗಂಟೇಗಳೇ ಬೇಕಾಗಬಹುದು. ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ವಿಷಾನಿಲ ಸೋರಿಕೆಯಿಂದಾಗಿ ಕಾರ್ಖಾನೆಯ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಯಾಗಿದ್ದು, ಗೋಪಾಲಪಟ್ಟಣಂ ಸುತ್ತಲಿನ ಐದು ಗ್ರಾಮಗಳಲ್ಲಿನ ಜನರಿಗೆ ಉಸಿರಾಟದ ತೊಂದರೆ ಮತ್ತು ಗಂಟಲು ಕೆರೆತ ಸಮಸ್ಯೆ ಆರಂಭವಾಗಿದೆ. ನೂರಾರು ಮಂದಿ ಉಸಿರಾಟದ ಸಮಸ್ಯೆ, ಗಂಟಲು ನೋವು, ಕಣ್ಣಿನ ಉರಿ, ಹೊಟ್ಟೆ ನೋವು, ಇತರೆ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಅಸ್ವಸ್ಥರನ್ನು ಆಸ್ಪತ್ರೆಗೆ ರವಾನಿಸಲು ಇದೀಗ ಆ್ಯಂಬುಲೆನ್ಸ್ ಗಳನ್ನು ಮತ್ತು ಸರ್ಕಾರಿ ಸಾರಿಗೆ ಬಸ್ ಗಳನ್ನು ಕೂಡ ನಿಯೋಜನೆ ಮಾಡಲಾಗಿದೆ. ಇದೇ ವಿಚಾರವಾಗಿ ಮಾತನಾಡಿರುವ ಆಂಧ್ರ ಪ್ರದೇಶ ಡಿಜಿಪಿ ಗೌತಮ್ ಸವಾಂಗ್ ಅವರು, ಪ್ರಸ್ತುತ ಅಸ್ವಸ್ಥರಾಗಿರುವವರ ಪೈಕಿ ಬಹುತೇಕ ಮಂದಿ ಇದೇ ಎಲ್ ಜಿ ಪಾಲಿಮರ್ಸ್ ಕಾರ್ಖಾನೆಯ ನೌಕರರಾಗಿದ್ದಾರೆ. ಬಹುತೇಕ ಮಂದಿ ಸುತ್ತಮುತ್ತಲಿನ ನಿವಾಸಿಗಳೇ ಆಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.

ಕೇಂದ್ರ ಸಚಿವ ಕಿಶನ್ ರೆಡ್ಡಿ ಸಂತಾಪ
ಇನ್ನು ವಿಶಾಖಪಟ್ಟಣಂ ವಿಷಾನಿಲ ಸೋರಿಕೆ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಸಂತಾಪ ಸೂಚಿಸಿದ್ದು, ದುರಂತದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಈ ಕುರಿತಂತೆ ನಾನು ಆಂಧ್ರ ಪ್ರದೇಶ ಮುಖ್ಯ ಕಾರ್ಯದರ್ಶಿಗಳು ಮತ್ತು ಆಂಧ್ರ ಪ್ರದೇಶ ಪೊಲೀಸ್ ಡಿಜಿಪಿ ಅವರೊಂದಿಗೆ ಮಾತನಾಡಿದ್ದೇನೆ. ಪರಿಸ್ಥಿತಿ ನಿಯಂತ್ರಿಸಲು ಬೇಕಾದ ಎಲ್ಲ ನೆರವು ಕೇಂದ್ರ ಸರ್ಕಾರದಿಂದ ದೊರೆಯಲಿದೆ ಎಂದು ಹೇಳಿದ್ದೇನೆ ಎಂದು ಹೇಳಿದ್ದಾರೆ.
ವಿಶಾಖಪಟ್ಟಣಂನಲ್ಲಿ ನಡೆದಿರುವ ವಿಷಾನಿಲ ಸೋರಿಕೆ ದುರಂತದ ಭೀಕರತೆಯ ಮನಕಲಕುವ ವೀಡಿಯೋ