ಕೋಟ : ಬ್ರಹ್ಮಾವರ ಠಾಣೆಯ ಪೊಲೀಸ್ ಕಾನ್ ಸ್ಟೇಬಲ್ ಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಬೆನ್ನಲ್ಲೇ ಉಡುಪಿ ಜಿಲ್ಲೆಯ ವಡ್ಡರ್ಸೆ ಗ್ರಾಮದ ಯಾಳಹಕ್ಲು ಪ್ರದೇಶವನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ.

ಪೊಲೀಸ್ ಕಾನ್ ಸ್ಟೇಬಲ್ ಪತ್ನಿಯ ಮನೆ ಯಾಳಹಕ್ಲು ಪ್ರದೇಶದಲ್ಲಿದ್ದು, ಕಾನ್ ಸ್ಟೇಬಲ್ ಯಾಳಹಕ್ಲುವಿಗೆ ಮನೆಗೆ ಬಂದು ಹೋಗಿರುವ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ. ಇದರಿಂದಾಗಿ ಯಾಳಹಕ್ಲುವಿನಲ್ಲಿರುವ 50ಕ್ಕೂ ಅಧಿಕ ಮನೆಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಕಾನ್ ಸ್ಟೇಬಲ್ ಪತ್ನಿಯ ಮನೆಯವರನ್ನು ಕೊರೊನಾ ತಪಾಸಣೆ ನಡೆಸಲಾಗಿದ್ದು, ಎಲ್ಲರನ್ನೂ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಪ್ರಮುಖವಾಗಿ ಯಾಳಹಕ್ಲು ಸಂಪರ್ಕ ಕಲ್ಪಿಸುವ ಎಂಜಿ ರಸ್ತೆ ಯಾಳಹಕ್ಲು ರಸ್ತೆ ಹಾಗೂ ದೇಲಟ್ಟು – ಯಾಳಹಕ್ಲು ರಸ್ತೆಯನ್ನು ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಸಂಪೂರ್ಣ ಸೀಲ್ ಡೌನ್ ಮಾಡಿದ್ದಾರೆ. ಸೀಲ್ ಡೌನ್ ಪ್ರದೇಶದೊಳಗೆ ಯಾರಿಗೂ ಪ್ರವೇಶಾವಕಾಶವನ್ನು ನೀಡುತ್ತಿಲ್ಲ. ಅಲ್ಲದೇ ಯಾರೂ ಕೂಡ ಹೊರಗಡೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಸೀಲ್ ಡೌನ್ ಆದೇಶ ಹೇರಿಕೆ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಮೈಕ್ ಮೂಲಕ ಮಾಹಿತಿ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ. ಮನೆಯಿಂದ ಯಾರೂ ಕೂಡ ಹೊರ ಬರದಂತೆ ಎಚ್ಚರಿಕೆಯನ್ನು ನೀಡಲಾಗುತ್ತಿದೆ.