ಬ್ರಹ್ಮಾವರಕ್ಕೆ ಬೇಕಿದೆ ಕೃಷಿ ಕಾಲೇಜು, ಕರಾವಳಿ ಕೃಷಿಕರ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ ?

ಬ್ರಹ್ಮಾವರ : Brahmavar Bsc Agriculture college : ಕರಾವಳಿ ಕೃಷಿಕರು ಕೃಷಿಯನ್ನೇ ಆಶ್ರಯಿಸಿಕೊಂಡಿದ್ದಾರೆ. ಆದರೆ ಆಧುನೀಕರಣ, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕೃಷಿ ಮಾಡುವ ರೈತರ ಸಂಖ್ಯೆ ಬೆರಳಣಿಕೆಯಷ್ಟು ಮಾತ್ರ. ಹೀಗಾಗಿ ಕೃಷಿ ಲಾಭದಾಯಕವಾಗಿಲ್ಲ. ಕೃಷಿಕರ ಅನುಕೂಲಕ್ಕಾಗಿ ಬ್ರಹ್ಮಾವರದ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲೊಂದು ಕೃಷಿ ಕಾಲೇಜು ನಿರ್ಮಾಣವಾಗಬೇಕು ಅನ್ನೋ ಕೂಗು 80 ರ ದಶಕದಿಂದಲೂ ಕೇಳಿಬರುತ್ತಿದೆ. ಆದರೆ ಇಂದಿಗೂ ಕರಾವಳಿ ರೈತರ ಬೇಡಿಕೆ ಈಡೇರಿಲ್ಲ. ಇದೀಗ ಬ್ರಹ್ಮಾವರದಲ್ಲಿ ನಿರ್ಮಾಣಗೊಂಡಿರುವ ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ ಮುಚ್ಚುವ ಭೀತಿಯಲ್ಲಿದ್ದು ಕರಾವಳಿಗರು ಮತ್ತೊಮ್ಮೆ ಹೋರಾಟದ ಹಾದಿ ಹಿಡಿದಿದ್ದಾರೆ.

1987 ರಲ್ಲಿ ಬ್ರಹ್ಮಾವರದಲ್ಲಿ ವಲಯ ಕೃಷಿ ಸಂಶೋಧನಾ ಕೇಂದ್ರವು ಕಳೆದ ಮೂರು ದಶಕಗಳಿಂದಲೂ ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಸುಮಾರು 350 ಎಕರೆ ವಿಸ್ತೀರ್ಣದಲ್ಲಿ ಚಾಚಿಕೊಂಡಿರುವ ವಲಯ ಕೃಷಿ ಸಂಶೋಧನಾ ಕೇಂದ್ರ ಕೃಷಿ ಸಂಶೋಧನೆ, ವಿಸ್ತರಣಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ತಾಂತ್ರಿಕತೆ ಯನ್ನು ಅಳವಡಿಸುವಂತೆಯೂ ರೈತರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಆದರೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡಿರುವ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನದಲ್ಲಿ ಪದವಿ ವ್ಯಾಸಂಗ ಮಾಡಲು ಅವಕಾಶ ಇಲ್ಲದೇ ಇರುವುದು ಕರಾವಳಿಯ ವಿದ್ಯಾರ್ಥಿಗಳಿಗೆ ಹಿನ್ನೆಡೆಯಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಶಕಗಳಿಂದಲೂ ಕರಾವಳಿಯಲ್ಲಿ ಕೃಷಿ ಕಾಲೇಜು ಆರಂಭದ ಕೂಗು ಕೇಳಿಬರುತ್ತಿದೆ.

2009 ರಲ್ಲಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಕೃಷಿ ಕಾಲೇಜು ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿತ್ತು. ಈ ಪೈಕಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಹ್ಮಾವರದ ವಲಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿರು ಸುಮಾರು 30 ಎಕರೆ ಜಾಗದಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿತ್ತು. ಆದರೆ ಕೃಷಿ ಮಹಾವಿದ್ಯಾಲಯ ಆರಂಭಕ್ಕೆ ರಾಜ್ಯ ಸರಕಾರ ಸಮ್ಮತಿ ನೀಡದ ಹಿನ್ನೆಲೆಯಲ್ಲಿ ಕಟ್ಟಡದಲ್ಲಿ 2014 ರಿಂದ ಡಿಪ್ಲೋಮಾ ಕೃಷಿ ಮಹಾವಿದ್ಯಾಲಯವನ್ನು ಆರಂಭ ಮಾಡಲಾಗಿತ್ತು. ಈಗಾಗಲೇ ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕೃಷಿ ಡಿಪ್ಲೋಮಾ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಆದರೆ ಬಿಜೆಪಿ ಸರಕಾರ ಕಳೆದ ವರ್ಷ ರಾಜ್ಯದಲ್ಲಿನ ಡಿಪ್ಲೋಮಾ ಕಾಲೇಜುಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ. ಇದರಿಂದಾಗಿ ಬ್ರಹ್ಮಾವರ ಕೃಷಿಕರ ಪಾಲಿನ ಆಶಾಕಿರಣವಾಗಿದ್ದ ಕೃಷಿ ಮಹಾ ವಿದ್ಯಾಲಯ ಆರಂಭಕ್ಕೂ ಮುನ್ನವೇ ಡಿಪ್ಲೋಮಾ ಮಹಾ ವಿದ್ಯಾಲಯ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿದೆ. ಇದನ್ನೂ ಓದಿ : Heavy Rain School Holiday : ಕರಾವಳಿಯಲ್ಲಿ ಆರಿದ್ರಾ ಮಳೆಯ ಆರ್ಭಟ : ಉಡುಪಿ, ದಕ, ಉಕ ಜಿಲ್ಲೆಯಲ್ಲಿ ಶಾಲೆಗೆ ರಜೆ

ಕರಾವಳಿ ಭಾಗದ ರೈತರು ಕೃಷಿ, ತೋಟಗಾರಿಕೆ, ಮೀನುಗಾರಿಕೆಯನ್ನು ಆಶ್ರಯಿಸಿಕೊಂಡಿದ್ದಾರೆ. ಮೀನುಗಾರಿಕಾ ಕಾಲೇಜು ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಕೃಷಿಗೆ ಸಂಬಂಧಿಸಿದಂತಹ ಯಾವುದೇ ಕಾಲೇಜು ಕರಾವಳಿ ಜಿಲ್ಲೆಯಲ್ಲಿಲ್ಲ. ಬ್ರಹ್ಮಾವರದ ವಲಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿಯೇ ಕೃಷಿ ಮಹಾ ವಿದ್ಯಾಲಯ ಆರಂಭ ಆದ್ರೆ ಇಲ್ಲಿರುವ ಸಂಶೋಧಕರ ಸಂಶೋಧನೆಯನ್ನು ಮುಂದಿನ ಪೀಳಿಗೆಗೆ ನೀಡಲು ಸಹಾಯಕವಾಗಿದೆ. ಇನ್ನು ಕರಾವಳಿ ಜಿಲ್ಲೆಗಳಿಂದ ವರ್ಷಂಪ್ರತಿ ಅನೇಕ ವಿದ್ಯಾರ್ಥಿಗಳು ಬೆಂಗಳೂರು, ಧಾರವಾಡ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕೃಷಿ ಬಿಎಸ್ಸಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಒಂದೊಮ್ಮೆ ಕರಾವಳಿ ಭಾಗದಲ್ಲಿಯೇ ಕೃಷಿ ಮಹಾ ವಿದ್ಯಾಲಯ ಆರಂಭವಾದ್ರೆ ರೈತರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಕೃಷಿ ಪದವಿಯನ್ನು ಪಡೆದುಕೊಂಡ್ರೆ ಕರಾವಳಿ ಭಾಗದಲ್ಲಿನ ಸಮಗ್ರ ಕೃಷಿ ಅಭಿವೃದ್ದಿ ಆಗಲಿದೆ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರವು ಈ ಹಿಂದೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಧೀನದಲ್ಲಿತ್ತು. ಆದ್ರೀಗ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಟ್ಟಿದೆ. ಬ್ರಹ್ಮಾವರದಲ್ಲಿ ಕೃಷಿ ಮಹಾವಿದ್ಯಾಲಯ ಆರಂಭಕ್ಕೆ ಈಗಾಗಲೇ ವಿದ್ಯಾವಿದ್ಯಾಲಯದಿಂದಲೂ ಸಾಕಷ್ಟು ಬಾರಿ ಮನವಿಯನ್ನು ಸಲ್ಲಿಸಲಾಗಿತ್ತು. ಜೊತೆಗೆ ಕೃಷಿಕರು ನಿರಂತರವಾಗಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಈ ಹಿಂದೆ ವಿ.ಎಸ್.ಆಚಾರ್ಯ ಅವರು ಹಠಹಿಡಿದು ಕೃಷಿ ಕಾಲೇಜು ಮಂಜೂರು ಮಾಡಿಸಿಕೊಂಡು ಬಂದಿದ್ದರೂ ಕೂಡ, ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದಾಗಿ ಕೃಷಿ ಕಾಲೇಜು ಆರಂಭವಾಗಿರಲೇ ಇಲ್ಲ. ಕಳೆದ ಬಾರಿ ಬಿಜೆಪಿ ಶಾಸಕ ರಘುಪತಿ ಭಟ್‌ ಅವರು ಮನಸ್ಸು ಮಾಡಿದ್ರೆ ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಆರಂಭವಾಗುತ್ತಿತ್ತು. ಆದರೆ ಅವರು ಅಷ್ಟೊಂದು ಆಸಕ್ತಿ ವಹಿಸಲೇ ಇಲ್ಲಾ ಅನ್ನೋ ಆರೋಪ ಕೇಳಿಬಂದಿದೆ.

ಇನ್ನು ಉಡುಪಿ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಅವರು ಸದ್ಯ ಕೇಂದ್ರದ ಕೃಷಿ ಸಚಿವರಾಗಿದ್ದಾರೆ. ಕರಾವಳಿ ಭಾಗದವರಾಗಿರುವ ಶೋಭಾ ಕರಂದ್ಲಾಜೆ ಅವರಿಗೆ ಕರಾವಳಿ ಕೃಷಿ, ಕೃಷಿಕರ ಸಮಸ್ಯೆಯ ಅರಿವಿದೆ. ಆದರೂ ಕೂಡ ಮುತುವರ್ಜಿ ವಹಿಸಿ ಕೃಷಿ ಕಾಲೇಜು ಆರಂಭಕ್ಕೆ ಮನಸ್ಸು ಮಾಡಿಲ್ಲ ಅನ್ನೋ ಬೇಸರ ಕರಾವಳಿಗರದ್ದು. ಈ ಹಿಂದೆ ಕರಾವಳಿ ಕೃಷಿಕರ ಪಾಲಿಗೆ ಆಶಾಕಿರಣವಾಗಿದ್ದ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಅವಸಾನದ ಅಂಚಿಗೆ ತಲುಪಿದ್ದು, ಕರಾವಳಿ ರೈತರ ಹೋರಾಟದಿಂದಾಗಿ ಕಾರ್ಖಾನೆ ಉಳಿದು ಕೊಂಡಿತ್ತು. ಕರಾವಳಿ ಭಾಗದ ಜನರು ಎಲ್ಲವನ್ನೂ ಹೋರಾಟದ ಮೂಲಕವೇ ಪಡೆಬೇಕಾಗಿರುವುದು ದುರಂತ. ರಾಜ್ಯ ಸರಕಾರ ಕೂಡಲೇ ಕೃಷಿ ಕಾಲೇಜು ಆರಂಭ ಮಾಡದೇ ಇದ್ರೆ ಹೋರಾಟ ನಡೆಸುವುದಾಗಿ ಹೋರಾಟಗಾರ ಸತೀಶ್‌ ಪೂಜಾರಿ ಬಾರಕೂರು ಅವರು ಎಚ್ಚರಿಕೆ ನೀಡಿದ್ದಾರೆ.

ಡಿಪ್ಲೋಮಾ ಕಾಲೇಜು ಉಳಿಸಿ, ಕೃಷಿ ಕಾಲೇಜು ಆರಂಭಿಸಿ

ಬ್ರಹ್ಮಾವರ ಡಿಪ್ಲೋಮಾ ಕೃಷಿ ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಡಿಪ್ಲೋಮಾ ಕಾಲೇಜನ್ನು ಉಳಿಸಿಕೊಂಡು, ಕೃಷಿ ಮಹಾವಿದ್ಯಾಲಯ ಆರಂಭ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಕೃಷಿಕರ ಮಕ್ಕಳು ಪ್ರಗತಿಪರ ಕೃಷಿಕರಾಗಲು ಕೃಷಿ ಕಾಲೇಜುಗಳ ಪಾತ್ರ ಮಹತ್ತರವಾದುದು. ಕರಾವಳಿಯಲ್ಲಿ ಕೃಷಿ ಕಾಲೇಜು ಆರಂಭವಾದ್ರೆ ಕೇವಲ ಕರಾವಳಿಗರು ಮಾತ್ರವಲ್ಲ ಇತರ ಜಿಲ್ಲೆಗಳ ರೈತರ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಡಿಪ್ಲೋಮಾ ಪದವಿ ಪಡೆದಿರುವ ವಿದ್ಯಾರ್ಥಿಗಳು ಕೃಷಿ ಮಹಾವಿದ್ಯಾಲಯ ಆರಂಭವಾದ್ರೆ, ಪದವಿ ಶಿಕ್ಷಣವನ್ನು ಪಡೆಯಲು ಕೂಡ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಡಿಪ್ಲೋಮಾ ಕಾಲೇಜನ್ನು ಮೇಲ್ದರ್ಜೆಗೆ ಏರಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.

15 ಕೋಟಿ ವೆಚ್ಚದಲ್ಲಿ ಕಾಲೇಜು, ಹಾಸ್ಟೆಲ್‌ ನಿರ್ಮಾಣ

ಕೃಷಿ ಮಹಾವಿದ್ಯಾಲಯ ಆರಂಭಿಸಬೇಕು ಅನ್ನೋ ಹಿನ್ನೆಲೆಯಲ್ಲಿಯೇ ರಾಜ್ಯ ಸರಕಾರ ಬ್ರಹ್ಮಾವರ ಡಿಪ್ಲೋಮಾ ಮಹಾವಿದ್ಯಾಲಯಕ್ಕೆ ಕಾಲೇಜು ಕಟ್ಟಡ ಹಾಗೂ ಎರಡು ಹಾಸ್ಟೆಲ್‌ ನಿರ್ಮಾಣವಾಗಿದೆ. ತಲಾ 5 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಲೇಜು ಕಟ್ಟಡ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್‌ ಸೌಲಭ್ಯವನ್ನು ನೀಡಲಾಗಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಹೈಟೆಕ್‌ ತಂತ್ರಜ್ಞಾನವನ್ನು ಒಳಗೊಂಡಿರುವ ಕ್ಲಾಸ್‌ ರೂಂ, ಲ್ಯಾಬ್‌, ಗ್ರಂಥಾಲಯ, ಕಂಪ್ಯೂಟರ್‌ ಲ್ಯಾಬ್‌ ನಿರ್ಮಾಣ ಮಾಡಲಾಗಿದೆ. ಜೊತೆಗೆ ತಲಾ ನೂರು ವಿದ್ಯಾರ್ಥಿಗಳು ಉಳಿದುಕೊಳ್ಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಾಸ್ಟೆಲ್‌ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಆದರೆ 2021 ರಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್‌ ನಿರ್ಮಾಣವಾಗಿತ್ತು. ಇದುವರೆಗೂ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರು ಉಳಿದುಕೊಂಡಿಲ್ಲ. ಒಂದೊಮ್ಮೆ ಇದೇ ಕಾಲೇಜು ಕಟ್ಟಡ, ಹಾಸ್ಟೆಲ್‌ ಬಳಸಿಕೊಂಡು ಕೃಷಿ ಪದವಿ ಕಾಲೇಜು ಆರಂಭಿಸಬಹುದಾಗಿದೆ. ಇಲ್ಲವಾದ್ರೆ ಕೋಟ್ಯಾಂತರ ರೂಪಾಯಿ ವ್ಯಯಿಸಿ ನಿರ್ಮಾಣಗೊಂಡಿರುವ ಕಟ್ಟಡಗಳು ಅವಸಾನದ ಅಂಚಿಗೆ ತಲುಪಲಿವೆ ಅನ್ನೋ ಆತಂಕ ಸ್ಥಳೀಯರನ್ನು ಕಾಡುತ್ತಿದೆ.

ಕರಾವಳಿ ಕೃಷಿಕರಿಗೆ ವರದಾನ ಕೃಷಿ ಕಾಲೇಜು

ಇತರ ಜಿಲ್ಲೆಗಳಿಗೆ ಹೋಲಿಸಿದ್ರೆ ಕರಾವಳಿ ಕೃಷಿ ವಿಭಿನ್ನ. ಇಲ್ಲಿನ ಕೃಷಿಗೆ ಇಲ್ಲಿಯೇ ಸಂಶೋಧನೆ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ವಲಯ ಕೃಷಿ ಸಂಶೋಧನಾ ಕೇಂದ್ರ ಆ ಕಾರ್ಯವನ್ನು ನಡೆಸುತ್ತಿದೆ. ಆದರೆ ಇಲ್ಲಿ ನಡೆಯುವ ಸಂಶೋಧನೆಗಳನ್ನು ಜನರಿಗೆ ತಲುಪಿಸಲು ಕೃಷಿ ಕಾಲೇಜು ಮಹತ್ವದ ಪಾತ್ರವನ್ನು ವಹಿಸುತ್ತದೆ. ಕರಾವಳಿ ಭಾಗದ ರೈತರು ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿ, ಲಾಭದಾಯಕವಾಗಿ ಯಶಸ್ಸು ಕಾಣಲು ಕೂಡ ಸಹಕಾರಿಯಾಗಲಿದೆ. ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಕೇಂದ್ರ, ಕೃಷಿ ಪಾಠಶಾಲೆ, ಕೃಷಿ ಕಾಲೇಜಿನ ಲಾಭ ಕರಾವಳಿಗರಿಗೆ ಸಿಗುವ ನಿಟ್ಟಿನಲ್ಲಿ ರಾಜ್ಯ ಸರಕಾರ ಚಿಂತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಒಕ್ಕೊರಲಿನಿಂದ ಹೋರಾಟ ನಡೆಸಬೇಕಾಗಿದೆ.

ಇದನ್ನೂ ಓದಿ : ಕರಾವಳಿಯಲ್ಲಿ ಕೆಮಿಕಲ್‌ ಮರವಾಯಿ : ತಿಂದವರಿಗೆ ವಾಂತಿ, ಬೇಧಿ ಫಿಕ್ಸ್‌, ತಿನ್ನುವ ಮುನ್ನ ಹುಷಾರ್‌ !

ಇದನ್ನೂ ಓದಿ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗಾವಕಾಶ, 70 ಸಾವಿರ ರೂ. ವೇತನ

Comments are closed.