ಬಿಜೆಪಿ ಯಲ್ಲಿ ಮುಂದುವರಿದ ಕುಟುಂಬ ರಾಜಕಾರಣ…! ದಿ.ಅಂಗಡಿ ಸ್ಥಾನಕ್ಕೆ ಪುತ್ರಿ ಸ್ಪರ್ಧೆ…?!

ಕಾಂಗ್ರೆಸ್‌ ಮೇಲೆ ಕುಟುಂಬ ರಾಜಕಾರಣದ ಆರೋಪ ಮಾಡುವ ಬಿಜೆಪಿಯೂ ಈಗ ಅದೇ ವಿವಾದಕ್ಕೆ ಸಿಲುಕಿದೆ.ಬಿಜೆಪಿ ಕುಟುಂಬ ರಾಜಕಾರಣ ವನ್ನು ನಿರಾಕರಿಸುತ್ತ ಬಂದಿದ್ದರೂ ಬೆಳಗಾವಿ ಉಪಚುನಾವಣೆಯಲ್ಲಿ ಮತ್ತೆ ಕುಟುಂಬ ರಾಜಕಾರಣ ಮುನ್ನಲೆಗೆ ಬಂದಿದೆ.

ಕೊರೋನಾದಿಂದ ನಿಧನರಾದ ಬಿಜೆಪಿಯ ಹಿರಿಯ ಸಂಸದ ಹಾಗೂ ಕೇಂದ್ರ ಸಚಿವ ದಿ.ಸುರೇಶ್ ಅಂಗಡಿ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಲಿದ್ದು ಪಕ್ಷಗಳಲ್ಲಿ ಚುನಾವಣೆ ಸಿದ್ಧತೆ ತೀವ್ರಗೊಂಡಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿತ್ತು. ಈಗ ಅಂಗಡಿ ಅನುಪಸ್ಥಿತಿಯಲ್ಲಿ ಆ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿರೋ ಬಿಜೆಪಿ ಯಾರಿಗೆ ಟಿಕೇಟ್ ನೀಡಲಿದೆ ಅನ್ನೋದು ಕುತೂಹಲದ ಸಂಗತಿ.

ಈ‌ ಮಧ್ಯೆ ದಿ.ಅಂಗಡಿ ಕುಟುಂಬದವರಿಗೆ ಟಿಕೇಟ್ ನೀಡಿ ಅನುಕಂಪದ ಆಧಾರದ ಮೇಲೆ ಚುನಾವಣೆ ಗೆಲ್ಲಲು ಬಿಜೆಪಿ ಸ್ಕೆಚ್ ಹಾಕಿದೆ ಎಂಬ ವದಂತಿ ದಟ್ಟವಾಗಿದೆ.

ಇದಕ್ಕಾಗಿ ಬಿಜೆಪಿ ದಿ.ಅಂಗಡಿಯವರ ಪುತ್ರಿ ಹಾಗೂ ಬಿಜೆಪಿ ನಾಯಕ,ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೊಸೆ ಶೃದ್ಧಾ ಶೆಟ್ಟರ್ ಗೆ ಟಿಕೇಟ್ ನೀಡಲಾಗುತ್ತದೆ ಎನ್ನಲಾಗಿದೆ.

ಇದಕ್ಕೆ ಪೂರಕ ಎಂಬಂತೆ ಇದುವರೆಗೂ ಚುನಾವಣೆ, ರಾಜಕಾರಣದಿಂದ ದೂರವಿದ್ದ ದಿ.ಅಂಗಡಿ ಪುತ್ರಿ ಶೃದ್ಧಾ ದಿಢೀರ್ ರಾಜಕೀಯ ಸಭೆ, ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದು, ಬೆಳಗಾವಿಯ ಎಪಿಎಂಸಿಯಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಬಿಜೆಪಿ ನಾಯಕರ ಜೊತೆ ವೇದಿಕೆ ಹಂಚಿಕೊಂಡಿದ್ದರು.

ಮಾಧ್ಯಮಗಳ ಜೊತೆ ಮಾತನಾಡಿದ ಶೃದ್ಧಾ ಶೆಟ್ಟರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಖುಷಿಯಾಗುತ್ತಿದೆ. ಕಾರ್ಯಕರ್ತರು ತಂದೆಯ ಬಗ್ಗೆ ಅಭಿಮಾನದ ಮಾತುಗಳನ್ನಾಡುತ್ತಿದ್ದು, ಇದನ್ನು ಕೇಳಲು ಹೆಮ್ಮೆ ಎನ್ನಿಸುತ್ತಿದೆ ಎಂದಿದ್ದಾರೆ. ಆದರೆ ಉಪಚುನಾವಣೆ ಬಗ್ಗೆ ಮಾತನಾಡಲು ಶೃದ್ಧಾ ಶೆಟ್ಟರ್ ನಿರಾಕರಿಸಿದ್ದಾರೆ.


ಇನ್ನು ಕಾಂಗ್ರೆಸ್ ಕೂಡ ಎರಡು ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದೆ ಎನ್ನಲಾಗಿದ್ದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಬಿಜೆಪಿಯ ಜೊತೆಗೆ ಗುರುತಿಸಿಕೊಂಡ ಹಿಂದೂಪರ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡ ಬಿಜೆಪಿ ಲೋಕಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದು, ಬೆಳಗಾವಿ ನನ್ನ‌ಕರ್ಮಭೂಮಿ. ಹೀಗಾಗಿ ೪೫ ವರ್ಷಗಳ ಹೋರಾಟದ ಬದುಕಿಗಾಗಿ ಬಿಜೆಪಿ ನನಗೂ ಅವಕಾಶ ನೀಡಬೇಕೆಂದು ಬಯಸುತ್ತೇನೆ ಎಂದಿದ್ದಾರೆ.

ಹೀಗಾಗಿ ಬೆಳಗಾವಿ ಉಪಚುನಾವಣೆಯ ಬಿಜೆಪಿ ಟಿಕೇಟ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು ಕುಟುಂಬ ರಾಜಕಾರಣ ವರ್ಸರ್ಸ್ ಪಕ್ಷದ ಪರ ಹೋರಾಟಗಾರರ ಪೈಕಿ ಕಮಲಪಾಳಯದ ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Comments are closed.