ಬೆಂಗಳೂರು : ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 6 ತಿಂಗಳೇ ಕಳೆದಿದೆ. ಉಪಚುನಾವಣೆಯ ಬೆನ್ನಲ್ಲೇ ಬಹುಮತ ಸಾಭೀತು ಪಡಿಸೋ ಮೂಲಕ ತಮ್ಮದು ಸುಭದ್ರ ಸರಕಾರ ಅಂತಾ ಬಿಜೆಪಿ ನಾಯಕರು ಬೀಗುತ್ತಿದ್ದಾರೆ. ಅದರಲ್ಲೂ ಯಡಿಯೂರಪ್ಪ ಮುಂದಿನ ಮೂರು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯುತ್ತಾರೆಂಬ ವಿಶ್ವಾಸದಲ್ಲಿದ್ದಾರೆ. ಆದರೆ ಸಚಿವ ಸಂಪುಟ ವಿಸ್ತರಣೆಯ ಕಗ್ಗಂಟು ಬಿಜೆಪಿ ನಾಯಕರಿಗೆ ತಲೆನೋವು ತರಿಸಿದೆ. ಜೊತೆಗೆ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಸರಕಾರ ಪತನದ ಭೀತಿ ಎದುರಾಗಿದೆ.
ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಬುಡಕ್ಕೆ ಕೊಡಲಿಯೇಟು ಕೊಟ್ಟಿದ್ದ ಅನರ್ಹ ಶಾಸಕರು ಇದೀಗ ಬಿಜೆಪಿ ಸೇರಿದ್ದಾರೆ. ಪಕ್ಷದ ವಿರೋಧ, ಹೈಕಮಾಂಡ್ ಒಲ್ಲದ ಮನಸಿನಿಂದಲೇ ಬಿಜೆಪಿ ಟಿಕೆಟ್ ಪಡೆದು ಉಪಚುನಾವಣೆಯಲ್ಲಿ ಗೆಲುವನ್ನು ಕಂಡಿದ್ದಾರೆ. ಅಲ್ಲದೇ ಉಪ ಚುನಾವಣೆಯ ಬೆನ್ನಲ್ಲೇ ಹಲವರು ಅರ್ಹತೆಯ ಪಟ್ಟವನ್ನು ಗಿಟ್ಟಿಸಿಕೊಂಡ್ರೆ, ಕೆಲವರು ಅನರ್ಹರಾಗಿಯೇ ಉಳಿದುಕೊಂಡಿದ್ದಾರೆ. ಆದ್ರೀಗ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಅರ್ಹ ಹಾಗೂ ಅನರ್ಹ ಶಾಸಕರ ನಡುವೆಯೇ ವೈಮನಸ್ಸು ಶುರುವಾಗಿದೆ. ಮಾತ್ರವಲ್ಲ ಕೈ ಹಾಗೂ ದಳಪತಿಗಳಿಗೆ ಸರಿಯಾಗಿ ಗುನ್ನಾ ಕೊಟ್ಟಿದ್ದ ರೆಬೆಲ್ ಶಾಸಕರು ಇದೀಗ ಕಮಲ ನಾಯಕರಿಗೂ ಬೆದರಿಕೆಯ ತಂತ್ರ ಅನುಸರಿಸುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ ವಿರುದ್ದ ಮುಸಿಕೊಂಡು ಯಡಿಯೂರಪ್ಪ ಪರ ಬ್ಯಾಟಿಂಗ್ ನಡೆಸಿದ್ದ ಬೆಳಗಾವಿಯ ಸಾಹುಕಾರ್ ರಮೇಶ್ ಜಾರಕಿಹೊಳಿ ಇದೀಗ ಬಿಜೆಪಿ ಸರಕಾರದ ಬುಡಕ್ಕೆ ಕೊಡಲಿಯೇಟು ಕೊಡೋ ಸೂಚನೆ ಕೊಟ್ಟಿದ್ದಾರೆ.
ಬಹುಮತವಿಲ್ಲದೇ ಸರಕಾರ ರಚಿಸಿದ್ದ ಬಿಜೆಪಿ ಉಪಚುನಾವಣೆಯ ಬಳಿಕ ಬಹುಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿತ್ತು. ಅದರಲ್ಲೂ ಅನರ್ಹತೆಯ ಪಟ್ಟಗಿಟ್ಟಿಸಿಕೊಂಡಿದ್ದ ಅನರ್ಹ ಶಾಸಕರು ಉಪಚುನಾವಣೆಯ 15 ಕ್ಷೇತ್ರಗಳ ಪೈಕಿ 12 ಸ್ಥಾನಗಳನ್ನು ಗೆದ್ದು ಬೀಗಿದ್ರು. ಸಮ್ಮಿಶ್ರ ಸರಕಾರದ ಪತನದ ಹೊತ್ತಲ್ಲೇ ರೆಬೆಲ್ ಶಾಸಕರಿಗೆ ಯಡಿಯೂರಪ್ಪ ಸಚಿವ ಸ್ಥಾನ ನೀಡೋ ಭರವಸೆಯನ್ನು ನೀಡಿದ್ರು. ಅದರಲ್ಲೂ ಉಪಚುನಾವಣೆಯಲ್ಲಿ ಯಡಿಯೂರಪ್ಪ ಕೊಟ್ಟ ಮಾತಿನಂತೆ ಹೈಕಮಾಂಡ್ ಗೆ ಮನಸಿಲ್ಲದಿದ್ರೂ, ಎಲ್ಲರ ವಿರೋಧ ಕಟ್ಟಿಕೊಂಡು ಅನರ್ಹರಾಗಿದ್ದ ಶಾಸಕರನ್ನು ಚುನಾವಣಾ ಕಣಕ್ಕೆ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದಿದ್ರು. ಆದ್ರೀಗ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರೊ ಶಾಸಕರ ಜೊತೆಗೆ ಸೋತಿರೋ ಎಚ್.ವಿಶ್ವನಾಥ್ ಮತ್ತು ಎಂ.ಟಿ.ಬಿ.ನಾಗರಾಜ್ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸದ ಆರ್.ಶಂಕರ ಅವರಿಗೂ ಸಚಿವ ಸ್ಥಾನ ನೀಡುವಂತೆ ಪಟ್ಟುಹಿಡಿದಿದ್ದಾರೆ. ಅದರಲ್ಲೂ ರೆಬೆಲ್ ನಾಯಕ ರಮೇಶ್ ಜಾರಕಿಹೊಳಿ ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಸಾಲದಕ್ಕೆ ಪ್ರಭಾವಿ ಖಾತೆಗಳನ್ನು ನೀಡುವಂತೆ ಪಟ್ಟು ಹಿಡಿದಿದ್ದಾರೆ. ಬಿಜೆಪಿ ನಾಯಕರ ಮೇಲೆ ಒತ್ತಡ ತಂತ್ರಕ್ಕೆ ಮುಂದಾಗಿರೋ ರಮೇಶ್ ಜಾರಕಿಹೊಳಿ ತನ್ನ ಬಳಿ 40 ಮಂದಿ ಶಾಸಕರಿದ್ದಾರೆ ಅನ್ನೋ ಮೂಲಕ ಬಿಜೆಪಿಗೆ ಟಾಂಗ್ ಕೊಡೋ ಸೂಚನೆಯನ್ನು ನೀಡಿದ್ದಾರೆ. ಇಷ್ಟು ಸಾಲದೆಂಬಂತೆ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಹಲವು ಶಾಸಕರು ತಮ್ಮ ಮುಂದಿನ ನಡೆಯ ಕುರಿತು ಈಗಾಗಲೇ ರಹಸ್ಯ ಸ್ಥಳದಲ್ಲಿ ಮಾತುಕತೆ ನಡೆಸಿದ್ದಾರೆ. ರಹಸ್ಯ ಮಾತುಕತೆ ನಡೆಸಿರೋ ಬೆನ್ನಲ್ಲೇ ಹೊರ ರಾಜ್ಯಕ್ಕೆ ಹಾರೋ ಪ್ಲಾನ್ ರೂಪಿಸಿಕೊಂಡಿದ್ದಾರೆನ್ನಲಾಗುತ್ತಿದೆ.
ಒಂದಡೆ ವಲಸೆ ಶಾಸಕರ ತಲೆನೋವಾದ್ರೆ ಇನ್ನೊಂದೆಡೆ ಪಕ್ಷದ ಹಿರಿಯ ಶಾಸಕರೇ ಇದೀಗ ಬಿ.ಎಸ್.ಯಡಿಯೂರಪ್ಪ ವಿರುದ್ದ ಮುನಿಸಿಕೊಂಡಿದ್ದಾರೆ. ನಾಲ್ಕೈದು ಬಾರಿ ಶಾಸಕರಾಗಿದ್ದವರಿಗೂ ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಕ್ಕಿರಲಿಲ್ಲ. ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆ ಅನ್ನೋ ಕಾರಣಕ್ಕೆ ಕಳೆದ ಬಾರಿಯ ಸಚಿವ ಸಂಪುಟ ವಿಸ್ತರಣೆಯ ವೇಳೆಯಲ್ಲಿ ಹಿರಿಯ ಶಾಸಕರೇ ಮೌನಿಯಾಗಿದ್ದರು. ಆದರೆ ಈ ಬಾರಿ ವಲಸೆ ಶಾಸಕರಿಗೆ ಸಚಿವ ಸ್ಥಾನ ನೀಡೋದಕ್ಕೆ ಮುಂದಾಗುತ್ತಿದ್ದಂತೆಯೇ ಸ್ವಪಕ್ಷದ ಶಾಸಕರೇ ಬಿಎಸ್ ವೈ ಹಾಗೂ ಹೈಕಮಾಂಡ್ ವಿರುದ್ದ ತಿರುಗಿಬಿದ್ದಿದ್ದಾರೆ. ಒಂದೆಡೆ ಶ್ರೀರಾಮುಲು ಉಪಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ರೆ, ಇನ್ನೊಂದೆಡೆ ಉಮೇಶ್ ಕತ್ತಿ ಸಚಿವ ಸ್ಥಾನಕ್ಕಾಗಿ ಕಾದು ಕುಳಿತಿದ್ದಾರೆ. ಇನ್ನು ಕರಾವಳಿ ಭಾಗಕ್ಕೆ ಕೇವಲ ಒಂದೇ ಒಂದು ಸಚಿವ ಸ್ಥಾನ ನೀಡಿರೋ ಹಿನ್ನೆಲೆಯಲ್ಲಿ ಹಿರಿಯ ಶಾಸಕರಾಗಿರೋ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್.ಮೆಂಡನ್, ರಘುಪತಿ ಭಟ್, ಸುನಿಲ್ ಕುಮಾರ್, ಅಂಗಾರ ಸೇರಿದಂತೆ ಹಲವು ಶಾಸಕರು ಯಡಿಯೂರಪ್ಪ ಮೇಲೆ ಒತ್ತಡ ಹೇರುತ್ತಿದ್ದಾರೆ. ಸಾಲದಕ್ಕೆ ಅರವಿಂದ ಲಿಂಬಾವಳಿ, ಹಾಲಪ್ಪ ಸೇರಿದಂತೆ ಹಲವರು ಹೈಕಮಾಂಡ್ ಭೇಟಿಯಾಗಿ ಸಚಿವ ಸ್ಥಾನಕ್ಕೆ ಒತ್ತಡ ಹೇರಿದ್ದಾರೆ. ಸ್ವಪಕ್ಷ ಶಾಸಕರೇ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರೋದು ಬಿಎಸ್ ವೈಗೆ ಕಗ್ಗಂಟಾಗಿ ಪರಿಣಮಿಸುತ್ತಿದೆ.
ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಗೆ ದಿನಾಂಕವನ್ನು ನಿಗದಿ ಪಡಿಸಿದ್ದಾರೆ. ಜಾತೀವಾರು, ಪ್ರಾಂತೀಯವಾರ ಲೆಕ್ಕಾಚಾರದಲ್ಲಿ ಯಡಿಯೂರಪ್ಪ ನೂತನ ಸಚಿವರ ಪಟ್ಟಿಯನ್ನು ಸಿದ್ದಪಡಿಸಿದ್ರೆ, ಬಿಜೆಪಿ ಹೈಕಮಾಂಡ್ ಪಕ್ಷ ನಿಷ್ಠರ ಜೊತೆಗೆ ವಲಸೆ ನಾಯಕರಿಗೆ ಮಣೆ ಹಾಕಿದೆ. ಸೋತ ಅನರ್ಹರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡೋದಕ್ಕೆ ಸಾಧ್ಯವೇ ಇಲ್ಲಾ ಅಂತಾ ಬಿ.ಎಸ್.ವೈ ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ. ಆದರೆ ಸಚಿವ ಸಂಪುಟ ವಿಸ್ತರಣೆ ಬಿಜೆಪಿ ನಾಯಕರು ಹಾಗೂ ವಲಸೆ ನಾಯಕರ ನಡುವೆ ವೈಮನಸ್ಸು ಮೂಡೋದ್ರಲ್ಲಿ ಅನುಮಾನವೇ ಇಲ್ಲಾ. ಇನ್ನು ಪ್ರಭಾವಿ ಖಾತೆಗಳನ್ನು ನೀಡದೇ ಇದ್ರೆ ಬೆಳಗಾವಿ ಸಾಹುಕಾರ್ ಮತ್ತೆ ರೆಬೆಲ್ ಆಗೋ ಸಾಧ್ಯತೆಯಿದೆ. ಹೀಗಾಗಿಯೇ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ರಾಜ್ಯ ಸರಕಾರ ಪತನವಾಗುತ್ತೆ ಅಂತಾ ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಸ್ಪೆಷಲ್ ಡೆಸ್ಕ್ NEWSNEXTಕನ್ನಡ