ಭಾರತಕ್ಕೆ ಭೇಟಿ ನೀಡೋದು ಕ್ಷೇಮವಲ್ಲ….! ಪ್ರಯಾಣ ಮುಂದೂಡಿ…! ನಾಗರಿಕರಿಗೆ ಅಮೇರಿಕಾ ಸೂಚನೆ…!!

ಭಾರತದಲ್ಲಿ ಕೊರೋನಾ ಎರಡನೇ ಅಲೆಯ ಹೊಡೆತ ಜೋರಾಗಿರುವ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಭಾರತವನ್ನು ಅಪಾಯಕಾರಿ ಎಂದು ಪರಿಗಣಿಸುವ ಸ್ಥಿತಿ ಎದುರಾಗಿದೆ. ಅಮೇರಿಕಾ ತನ್ನ ನಾಗರಿಕರಿಗೆ ಭಾರತ ಪ್ರವಾಸವನ್ನು ನಿಲ್ಲಿಸುವಂತೆ ಅಥವಾ ಮುಂದೂಡುವಂತೆ ಸಲಹೆ ನೀಡಿದೆ.

ಅಮೇರಿಕಾದ ರೋಗ ನಿಯಂತ್ರಕ ಹಾಗೂ ತಡೆಗಟ್ಟುವಿಕೆಯ  ಕೇಂದ್ರ ಜನರು ಭಾರತ ಪ್ರಯಾಣವನ್ನು ಸದ್ಯಕ್ಕೆ ರದ್ದುಗೊಳಿಸುವುದು ಉತ್ತಮ ಎಂದು ಸಲಹೆ ನೀಡಿದೆ.

ಒಂದೊಮ್ಮೆ ಪ್ರಯಾಣಿಸಲೇಬೇಕು ಎಂದಾದಲ್ಲಿ, ಪ್ರಯಾಣಕ್ಕೂ ಮುನ್ನವೇ ನೀವು ನಿಮ್ಮ ಲಸಿಕೆಯ ಡೋಸ್ ಗಳನ್ನು ಪಡೆದಿರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. 6 ಅಡಿ ಅಂತರ ಕಾಪಾಡಬೇಕು ಮತ್ತು ಆಗಾಗ ಕೈ ತೊಳೆಯಬೇಕೆಂದು ಸಲಹೆ  ನೀಡಿದೆ.

ಭಾರತದಲ್ಲಿ ಕೋವಿಡ್-19 ಹರಡುವಿಕೆಯ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಇಲ್ಲಿಂದ ಪ್ರಯಾಣಿಸಿ ಸೋಂಕಿಗೆ ತುತ್ತಾಗುವ ಸಾಧ್ಯತೆ  ಹೆಚ್ಚಿದೆ. ರೂಪಾಂತರಿ ವೈರಸ್ ಆತಂಕ ಹೆಚ್ಚಿರೋದರಿಂದ ಪ್ರಯಾಣವನ್ನು ಮುಂದೂಡುವುದೇ ಕ್ಷೇಮ. ಇಲ್ಲದಿದ್ದರೇ ಲಸಿಕೆ ಪಡೆದು ಪ್ರಯಾಣಿಸಿ ಎಂದಿದೆ.

ಸಂಪೂರ್ಣ ಡೋಸ್ ಲಸಿಕೆ ಪಡೆದಿದ್ದರೇ ನೀವು ಅಮೇರಿಕಾದಿಂದ ತೆರಳುವಾಗ ಅಥವಾ ಬಂದ ಬಳಿಕ ಕ್ವಾರಂಟೈನ್ ಅಥವಾ ಪರೀಕ್ಷೆಯ ಅಗತ್ಯವಿಲ್ಲ ಎಂದು ಹೇಳಿದೆ. ಬ್ರಿಟನ್ ಈಗಾಗಲೇ ಕೊರೋನಾ ಎರಡನೇ ಅಲೆಯ ಕಾರಣಕ್ಕೆ ಭಾರತವನ್ನು ರೆಡ್ ಝೋನ್ ಗೆ ಸೇರಿಸಿದ್ದು, ಭಾರತದಿಂದ ಬ್ರಿಟನ್ ಗೆ ಪ್ರಯಾಣಿಸುವುದಕ್ಕೆ ತಡೆ ಹೇರಿದೆ.

ರೂಪಾಂತರಿ ಕೊರೋನಾ ವೈರಸ್ ಭಯದಿಂದ ಈಗಾಗಲೇ ಹಾಂಕಾಂಗ್ ಹಾಗೂ ನ್ಯೂಜಿಲೆಂಡ್ ದೇಶಗಳು ಭಾರತದ ಪ್ರಯಾಣಿಕರನ್ನು ನಿಷೇಧಿಸಿದ್ದು, ಜಾಗತಿಕ ಮಟ್ಟದಲ್ಲಿ ಭಾರತದ ಕೊರೋನಾ ಹರಡುವಿಕೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ದೇಶಗಳು ಭಾರತದ ಭೇಟಿಗೆ ನಿರ್ಬಂಧ ಹೇರಲಾರಂಭಿಸಿವೆ.

Comments are closed.