ಬೆಂಗಳೂರು : ಕೊರೊನಾ ವೈರಸ್ ಮಹಾಮಾರಿಯ ವಿರುದ್ದ ದೇಶವೇ ಸಮರ ಸಾರಿದೆ. ಆದರೆ ಬೆಂಗಳೂರಿನ ಸಾಧಿಕ್ ನಗರದ ನಿವಾಸಿಗಳು ಕೊರೊನಾ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಮಾತ್ರವಲ್ಲ ಮಾಹಿತಿ ಕೇಳಿದ ಆಶಾ ಕಾರ್ಯಕರ್ತೆಯರ ಮೇಲೆಗೆ ಗೂಂಡಾಗಿರಿ ನಡೆಸಿದ್ದಾರೆ.

ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪ್ರತೀ ಮನೆಯ ಮಾಹಿತಿಯನ್ನು ಕಲೆ ಹಾಕುವ ಕೆಲಸವನ್ನು ಮಾಡುತ್ತಿದೆ. ಕಳೆದ 14 ದಿನಗಳಿಂದಲೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮಾಹಿತಿ ಪಡೆಯುತ್ತಿದ್ದಾರೆ. ಆದರೆ ಕೊರೊನಾ ವೈರಸ್ ಕುರಿತು ಮಾಹಿತಿಯನ್ನು ಕೇಳಿದ್ರೆ ಮಾಹಿತಿ ನೀಡೋದಕ್ಕೆ ಸಾಧಿಕ್ ನಗರದ ಜನತೆ ಹಿಂದೇಟು ಹಾಕಿದ್ದಾರೆ.

ಮಾತ್ರವಲ್ಲ ಈ ವೇಳೆಯಲ್ಲಿ ಮಸೀದಿಯಲ್ಲಿರುವ ಮೈಕ್ ಮೂಲಕ ಕಿಡಿಗೇಡಿಗಳು ಯಾರೂ ಕೂಡ ಕೊರೊನಾ ವೈರಸ್ ಕುರಿತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಲೇ ಬೇಡಿ ಅಂತಾ ಅನೌನ್ಸ್ ಮಾಡಿದ್ದಾರೆ. ಅಲ್ಲದೇ ಧರ್ಮಗುರುಗಳು ಹೇಳಿದ್ರೆ ಮಾತ್ರವೇ ಮಾಹಿತಿಯನ್ನೇ ನೀಡುತ್ತೇವೆ ಅಂತಾ ಹೇಳುತ್ತಿದ್ದಾರೆ. ಇದರಿಂದಾಗಿ ಆಶಾ ಕಾರ್ಯಕರ್ತೆಯರು ಆತಂಕಕ್ಕೆ ಒಳಗಾಗಿದ್ದಾರೆ.