ಎಲ್ಲರನ್ನೂ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಬೆನ್ನು ನೋವು ಕೂಡ ಒಂದು. ನಮ್ಮ ಜೀವನ ಶೈಲಿ ಹಾಗೂ ಆಹಾರ ಪದ್ದತಿಗಳಿಂದಲೇ ಬಹುತೇಕರು ಬೆನ್ನುನೋವಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದ್ದಕ್ಕಿದ್ದಂತೆಯೇ ಕಾಣಿಸಿಕೊಳ್ಳುವ ಬೆನ್ನುನೋವು ನಮ್ಮನ್ನು ಹೈರಾಣಾಗಿಸುತ್ತೆ. ಆರಂಭದಲ್ಲಿ ಸಣ್ಣ ಸಮಸ್ಯೆಯಾಗಿ ಕಾಡುವ ಬೆನ್ನ ನೋವು ಕಾಲಕ್ರಮೇಣ ಇತರ ಆರೋಗ್ಯ ಸಮಸ್ಯೆಗಳೊಂದಿಗೆ ಬೆರೆತು ಗಂಭೀರ ಆರೋಗ್ಯ ಸಮಸ್ಯೆಯಾಗಿ ಬೆಂಬಿಡದಂತೆ ಕಾಡುತ್ತದೆ.

ಸಾಮಾನ್ಯವಾಗಿ ಸ್ನಾಯುನೋವು, ಸಂಧಿವಾತ, ಸ್ನಾಯು ಸೆಳೆತ, ಬೆನ್ನುಮೂಳೆಯ ಸರಪಳಿ, ಅಸ್ಥಿ ರುಜ್ಜುಗಳಿಗೆ ಒತ್ತಡ ಹೇರುವುದು, ಅನುಚಿತವಾದ ಭಂಗಿ, ಅತಿಯಾದ ಭಾರ ಎತ್ತುವುದು ಹೀಗೆ ನಾನಾ ಕಾರಣಗಳಿಂದಾಗಿ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಬೆನ್ನು ನೋವಿನ ಶಮನಕ್ಕೆ ದುಬಾರಿ ಬೆಲೆ ತೆತ್ತು ಸುಸ್ತಾಗಿದ್ದೀರಾ.. ಹಾಗಾದ್ರೆ ಮನೆ ಮದ್ದಿನಲ್ಲಿರುವ ಸರಳ ಸೂತ್ರಗಳನ್ನು ಅಳವಡಿಸಿಕೊಂಡು ಬೆನ್ನುನೋವಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಿ.

ಆಹಾರದಲ್ಲಿ ಶುಂಠಿ ಬಳಸಿ : ಶುಂಠಿಯು ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿರುವ ನೈಸರ್ಗಿಕ ಔಷಧೀಯ ಮೂಲ. ಇದನ್ನು ಗಣನೀಯವಾಗಿ ಬಳಕೆ ಮಾಡುವುದರಿಂದ ಬೆನ್ನು ನೋವನ್ನು ನಿವಾರಿಸಬಹುದು. ಶುಂಠಿಯ ಚೂರನ್ನು ನೀರಿಗೆ ಸೇರಿಸಿ, 30 ನಿಮಿಷಗಳ ಕಾಲ ಕುದಿಸಿ. ಬಳಿಕ ಸೋಸಿ ತಣಿಯಲು ಬಿಡಿ. ನಂತರ ಸೇವಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೆನ್ನುನೋವು ನಿವಾರಣೆಯಾಗುತ್ತದೆ.

ನೆಲದ ಮೇಲೆ ಮಲಗುವುದು ಉತ್ತಮ : ನಮ್ಮ ಪೂರ್ವಜರು ನೆಲದ ಮೇಲೆಯೇ ಮಲಗುತ್ತಿದ್ದರು. ಆದ್ರೆ ಇಂದಿನ ಆಧುನಿಕ ಯುಗದಲ್ಲಿ ಜನ ಬೆಡ್, ಹಾಸಿಗೆಯನ್ನೇ ಆಶ್ರಯಿಸುತ್ತಿದ್ದಾರೆ. ಬೆಡ್ ಮೇಲೆ ಮಲಗುವುದರಿಂದಲೂ ಬೆನ್ನು ನೋವು ಕಾಣಿಸಿಕೊಳ್ಳತ್ತದೆ. ಆದರೆ ನೆಲದ ಮೇಲೆ ಬೆನ್ನಿನ ಸಹಾಯದಿಂದ ಮಲಗಬೇಕು. ಹೀಗೆ ಮಾಡುವುದರಿಂದ ಚೆನ್ನಾಗಿ ನಿದ್ರೆ ಬರುವುದರ ಜೊತೆಗೆ ದೇಹಕ್ಕೆ ಆರಾಮವೂ ಲಭಿಸುತ್ತದೆ. ಮೈಕೈ ನೋವು, ಬೆನ್ನು ನೋವು ಮಾಯವಾಗುತ್ತದೆ.

ಐಸ್ ಮತ್ತು ಶಾಖದ ಪ್ಯಾಡ್ ಬಳಸಿ : ಬೆನ್ನು ನೋವಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು, ಐಸ್ ಅಥವಾ ಶಾಖದ ಪ್ಯಾಡ್ ಬಳಸುವುದು ಉತ್ತಮ. ಬೆನ್ನು ನೋವು ನಿವಾರಣೆಗೆ ಐಸ್ ಅಥವಾ ಶಾಖದ ಪ್ಯಾಡ್ ಬಳಸುವ ಮೂಲಕ ನೋವನ್ನು ನಿವಾರಿಸಬಹುದು. ಈ ಎರಡು ಕ್ರಮಗಳನ್ನು ಪರ್ಯಾಯವಾಗಿ ಬಳಸುವುದರಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ. ಸುಮಾರು 25 ನಿಮಿಷಗಳ ಕಾಲ ಬಳಕೆ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಉಪ್ಪಿನಿಂದ ಸ್ನಾನ ಮಾಡಿ : ಬೆಚ್ಚಗಿನ ಎಪ್ಸಮ್ ಉಪ್ಪಿನಲ್ಲಿ ಸ್ನಾನ ಮಾಡುವುದರಿಂದ ಬೆನ್ನು ನೋವು ನಿವಾರಣೆಗೆ ಸಹಕಾರಿಯಾಗಲಿದೆ. ಉಪ್ಪಿನಲ್ಲಿರುವ ಮ್ಯಾಗ್ನೀಶಿಯಂ ಸ್ನಾಯುಗಳಿಗೆ ಉತ್ತಮ ವಿಶ್ರಾಂತಿಯನ್ನು ನೀಡುತ್ತದೆ. ಹೀಗಾಗಿ ಉರುಗು ಬೆಚ್ಚನೆಯ ನೀರಿನಲ್ಲಿ ಉಪ್ಪನ್ನು ಬಳಸಿ ಸ್ನಾನ ಮಾಡುವುದರಿಂದ ಬೆನ್ನು ನೋವಿನ ಸಮಸ್ಯೆಗೆ ಪರಿಹಾರ ಲಭಿಸುತ್ತದೆ.

ಬೆನ್ನುಮೂಳೆಗೆ ವಿಶ್ರಾಂತಿ ನೀಡಿ : ಬೆನ್ನುನೋವು ಕಾಣಿಸಿಕೊಂಡಾಗ ಬೆನ್ನು ಮೂಳೆಗೆ ವಿಶ್ರಾಂತಿ ನೀಡುವುದು ಬಹಳ ಮುಖ್ಯ. ಅತಿಯಾದ ಬೆನ್ನುನೋವು ಇದ್ದಾಗ ಬೆನ್ನು ಮೂಳೆಯ ಮೇಲೆ ಒತ್ತಡ ಬೀಳದ ಹಾಗೆ ವಿಶ್ರಾಂತಿಯ ಕ್ರಮಗಳನ್ನು ಅನುಸರಿಸುವುದರಿಂದ ಬೆನ್ನುನೋವಿನ ಸಮಸ್ಯೆಗೆ ಪರಿಹಾರ ಪಡೆಯಲು ಸಾಧ್ಯ.

ಯೋಗ ಮತ್ತು ಧ್ಯಾನ: ಮಾನಸಿಕ ಹಾಗೂ ದೈಹಿಕ ನೋವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುವ ಅತ್ಯುತ್ತಮ ವಿಧಾನವೆಂದರೆ ಯೋಗ ಮತ್ತು ಧ್ಯಾನ. ಪುರಾತನ ಕಾಲದಿಂದಲೂ ರೂಢಿಯಲ್ಲಿರುವ ಈ ಚಿಕಿತ್ಸಕ ವಿಧಾನವನ್ನು ಗಣನೀಯವಾಗಿ ಅನುಸರಿಸುವುದರಿಂದ ಬೆನ್ನುನೋವನ್ನು ಸುಲಭವಾಗಿ ನಿವಾರಿಸಬಹುದು.

ಪೌಷ್ಟಿಕ ಆಹಾರದ ಸೇವನೆ: ಮೂಳೆ ಮುರಿತ, ಸಂಧಿ ನೋವು, ಬೆನ್ನು ನೋವು ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ನಾವು ಸೇವಿಸುವ ಆಹಾರವು ಸಹ ಗಂಭೀರವಾದ ಪರಿಣಾಮವನ್ನು ಬೀರುವುದು. ಹಾಗಾಗಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೊಂದಿರುವ ಆಹಾರಗಳನ್ನು ಸೇವಿಸಬೇಕು. ಅದಕ್ಕಾಗಿ ಹಸಿರು ಸೊಪ್ಪುಗಳು, ಚೀಸ್, ಮೊಸರು, ಮೊಟ್ಟೆ, ಕಿತ್ತಳೆ, ಸೋಯಾ ಹಾಲು, ಮೀನು ಸೇರಿದಂತೆ ಇನ್ನಿತರ ಆರೋಗ್ಯಕರ ಆಹಾರವನ್ನು ಸೇವಿಸಬೇಕು.

ಲಘು ವ್ಯಾಯಾಮ : ಸೂಕ್ತ ರೀತಿಯ ವ್ಯಾಯಾಮ ಮಾಡುವುದರ ಮೂಲಕ ನೋವನ್ನು ನಿವಾರಿಸಲು ಸಹಕಾರಿಯಾಗಿದೆ.ನಿಯಮಿತವಾಗಿ ಕೆಲವು ಸೂಕ್ತ ವ್ಯಾಯಾಮಗಳನ್ನು ಮಾಡುವುದರ ಮೂಲಕ ನೋವನ್ನು ನಿಯಂತ್ರಣದಲ್ಲಿ ಇಡಬಹುದು. ಅಲ್ಲದೆ ಪರಿಣಾಮಕಾರಿ ರೀತಿಯಲ್ಲಿ ನೋವು ನಿವಾರಣೆಯಾಗುವುದು.

ಕೂರುವ ಭಂಗಿಯ ಕಡೆ ಇರಲಿ ಎಚ್ಚರ : ಅನುಚಿತ ರೀತಿಯ ಭಂಗಿಯನ್ನು ಹೊಂದುವುದರಿಂದ ಬೆನ್ನು ಮೂಳೆಯ ಮೇಲೆ ಭಾರಿ ಒತ್ತಡ ಉಂಟಾಗುವುದು. ಹಾಗಾಗಿ ನಿಂತುಕೊಳ್ಳುವಾಗ, ಕುಳಿತುಕೊಳ್ಳುವಾಗ, ಮಲಗುವಾಗ ಹಾಗೂ ದೀರ್ಘ ಸಮಯದ ಕೆಲಸ ಕೈಗೊಂಡಾಗ ಸೂಕ್ತವಾದ ಭಂಗಿಯನ್ನು ಅನುಸರಿಸುವುದರ ಮೂಲಕ ನೋವನ್ನು ನಿಯಂತ್ರಿಸಬಹುದು.