ಬೆಂಗಳೂರು: ರಕ್ಷಣಾ ಇಲಾಖೆಯ ಲೋಹದ ಹಕ್ಕಿಗಳು ಬಾನಂಗಳದಲ್ಲಿ ಮೂಡಿಸುವ ಚಿತ್ತಾರ ನೋಡೋಕೆ ಚೆಂದ. ಆದರೆ ಪ್ರತಿವರ್ಷ ಏರ್ ಶೋ ಕಣ್ತುಂಬಿಕೊಳ್ಳೋ ಬೆಂಗಳೂರಿಗರಿಗೆ ಈ ಭಾರಿ ನಿರಾಸೆ ಕಾದಿದೆ.

ಕೊರೋನಾ ಕಾರಣದಿಂದ ಏರ್ ಶೋ ಗೆ ಸೀಮಿತ ಪ್ರವೇಶಾವಕಾಶ ನೀಡಿ ಉಳಿದವರಿಗೆ ವರ್ಚುವಲ್ ಶೋ ವೀಕ್ಷಣೆಗೆ ಅವಕಾಶ ನೀಡಿ ಎಂದು ಆರೋಗ್ಯ ಇಲಾಖೆ ರಕ್ಷಣಾ ಇಲಾಖೆಗೆ ಶಿಫಾರಸ್ಸು ಮಾಡಿದೆ. ಫೆಬ್ರವರಿ 3 ರಿಂದ 7 ರವರೆಗೆ ಯಲಹಂಕದ ವಾಯು ನೆಲೆಯಲ್ಲಿ 13 ನೇ ಅಂತಾರಾಷ್ಟ್ರೀಯ ಏರೋ ಇಂಡಿಯಾ 2021 ಕಾರ್ಯಕ್ರಮವನ್ನು ನಡೆಸಲು ಕೇಂದ್ರ ರಕ್ಷಣಾ ಇಲಾಖೆ ನಿರ್ಧರಿಸಿದೆ.

ಆದರೆ ಜನವರಿ ಹಾಗೂ ಪೆಭ್ರವರಿ ವೇಳೆಗೆ ರಾಜ್ಯದಲ್ಲಿ ಕೊವೀಡ್ ಎರಡನೇ ಅಲೆ ಆರಂಭವಾಗೋ ನೀರಿಕ್ಷೆ ಹಿನ್ನೆಲೆಯಲ್ಲಿ ಹೆಚ್ಚು ಜನರು ಸೇರಿ ಏರ್ ಶೋ ನಡೆಸೋದು ಸೂಕ್ತವಲ್ಲ. ಹೀಗಾಗಿ ಸೀಮಿತ ಜನರಿಗೆ ಅವಕಾಶ ನೀಡಿ. ಉಳಿದವರಿಗೆ ವರ್ಚುವಲ್ ಏರ್ ಶೋ ನೋಡಲು ಅವಕಾಶ ಕಲ್ಪಿಸುವುದು ಸೂಕ್ತ ಎಂದು ಆರೋಗ್ಯ ಇಲಾಖೆ ಅಭಿಪ್ರಾಯ ಪಟ್ಟಿದೆ.

ರಾಜ್ಯ ಸರ್ಕಾರ ಯಾವುದೇ ಕಾರ್ಯಕ್ರಮದಲ್ಲಿ ಹೆಚ್ಚು ಜನರು ಸೇರಬಾರದು ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ಇಲಾಖೆಯ ಆಯುಕ್ತ ಪಂಕಜಕುಮಾರ್ ಪಾಂಡೆ ರಕ್ಷಣಾ ಇಲಾಖೆಗೆ ಪತ್ರ ಬರೆದಿದ್ದಾರೆ.

ಜನವರಿ ಅಂತ್ಯಭಾಗದಲ್ಲಿ ಮತ್ತೊಮ್ಮೆ ಸಭೆ ನಡೆಸಿ ಅಂತಿಮ ನಿರ್ಣಯಕೈಗೊಳ್ಳಲು ಸಮಿತಿ ನಿರ್ಧರಿಸಿದೆ. ಪಾಸ್ ನೀಡುವ ಸಂದರ್ಭದಲ್ಲೇ ಪಾಸ್ ನಲ್ಲಿ ವರ್ಚೂವಲ್ ಎಂದು ನಮೂದಿಸಿ ನೀಡುವ ಕುರಿತು ಕೂಡ ಚಿಂತನೆ ನಡೆದಿದೆ.

ಒಟ್ಟಿನಲ್ಲಿ ಏಳು ದಿನಗಳ ಕಾಲ ರಕ್ಷಣಾ ಇಲಾಖೆಯ ವಿವಿಧ ವಿಮಾನಗಳ ಹಾರಾಟವನ್ನು , ಸಾಹಸವನ್ನು ಕಣ್ತುಂಬಿಕೊಳ್ಳುತ್ತಿದ್ದ ಜನರಿಗೆ ಒಂದು ಈ ಭಾರಿ ಕೊರೋನಾ ಅಡ್ಡಿಯಾಗಿ ಪರಿಣಮಿಸಿದ್ದು, ಏರ್ ಶೋ ವನ್ನು ವರ್ಚುವಲ್ ಆಗಿ ನೋಡುವ ಸ್ಥಿತಿ ಎದುರಾಗಿದೆ.