ಶಿವಮೊಗ್ಗ : ಹುಣಸೋಡು ಕ್ರಷರ್ ಸ್ಪೋಟ ಪ್ರಕರಣದಲ್ಲಿ 8 ಮಂದಿ ದುರಂತ ಅಂತ್ಯ ಕಂಡಿದ್ದಾರೆ. ದುರಂತದ ಬೆನ್ನಲ್ಲೇ ಒಂದೊಂದೆ ಅಕ್ರಮಗಳು ಬೆಳಕಿಗೆ ಬರುತ್ತಿದ್ದು, ಪ್ರಕರಣ ಸ್ಪೋಟಕ ತಿರುವು ಪಡೆದುಕೊಂಡಿದೆ.

ಶಿವಮೊಗ್ಗ ಹೊರವಲಯದ ಹುಣಸೋಡು ಬಳಿಯಲ್ಲಿ 2016 ರಲ್ಲಿ ಪರವಾನಿಗೆ ಮುಗಿದಿದ್ದರೂ ಕೂಡ ಕಲ್ಲುಗಣಿ ಮಾಲೀಕ ಸುಧಾಕರ್ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಅನ್ನೋದು ಬಯಲಾಗಿದೆ. ಮೂರು ವರ್ಷದ ಅವಧಿಗೆ ಕ್ರಷರ್ ಗಾಗಿ ಲೈಸೆನ್ಸ್ ಪಡೆದುಕೊಂಡಿದ್ದು, ಲೈಸೆನ್ಸ್ ಅವಧಿ ಮುಗಿದರೂ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಅನುಮತಿ ಇಲ್ಲದಿದ್ದರೂ, ಸ್ಪೋಟಕಗಳನ್ನು ಬಳಸಲಾಗಿದೆ. ಭಾರೀ ಪ್ರಮಾಣದಲ್ಲಿ ಡೈನಮೈಟ್ ಸಂಗ್ರಹಿಸಲಾಗಿತ್ತು. ಮೂರು ವರ್ಷಕ್ಕೆ ಲೈಸೆನ್ಸ್ ಪಡೆದುಕೊಂಡಿದ್ದ ಮಾಲೀಕ ಸುಧಾಕರ್, ಅವಧಿ ಮುಗಿದರೂ ಕ್ರಷರ್ ನಡೆಸುತ್ತಿರುವುದು ಗೊತ್ತಾಗಿದೆ.

ಶಿವಮೊಗ್ಗ ಹೊರವಲಯದ ಹುಣಸೋಡುವಿನಲ್ಲಿ ರೈಲ್ವೆ ಇಲಾಖೆಗೆ ಇಲ್ಲಿನ ಕ್ರಷರ್ ಗಳ ಮೂಲಕ ಜಲ್ಲಿಯನ್ನು ಸಾಗಾಟ ಮಾಡಲಾ ಗುತ್ತಿತ್ತು. ಶಿವಮೊಗ್ಗ ಜಿಲ್ಲಾಡಳಿತ ಕ್ರಷರ್ ಮಾಲೀಕರಿಗೆ 3 ವರ್ಷಗಳ ಅವಧಿಗೆ ಲೈಸೆನ್ಸ್ ನೀಡಿದ್ದರು. ಅಲ್ಲದೇ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆ ನಡೆಸದಂತೆಯೂ ಸೂಚನೆಯನ್ನು ನೀಡಿದ್ದರು. ಆದರೆ ಕ್ರಷರ್ ಮಾಲೀಕರು ಜಿಲ್ಲಾಡಳಿತದ ನಿರ್ದೇಶನವನ್ನು ಸಂಪೂರ್ಣವಾಗಿ ಗಾಳಿಗೆ ತೂರಿರುವುದು ಬಯಲಾಗಿದೆ.

ಅವಧಿ ಮೀರಿ ಅಕ್ರಮ ಗಣಿಗಾರಿಕೆ ?
ಮೂರು ವರ್ಷಗಳ ಕಾಲ ಗಣಿಗಾರಿಕೆ ನಡೆಸಲು ಲೈಸೆನ್ಸ್ ಪಡೆದಿದ್ದರೂ ಕೂಡ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರೋ ಕುರಿತು ಸ್ಥಳೀಯರು ಸಾಕಷ್ಟು ಬಾರಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇನ್ನು ಗಣಿಗಾರಿಕೆಗೆ ಬೇಕಾದ ಬೃಹತ್ ಬಂಡೆಗಳನ್ನು ಸ್ಪೋಟಿಸಲು ಅಪಾರ ಪ್ರಮಾಣದಲ್ಲಿ ಜಿಲೆಟಿನ್ ಕಡ್ಡಿಗಳನ್ನು ಸಂಗ್ರಹಿಸಲಾಗಿತ್ತು ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

3 ತಿಂಗಳಿಗೊಮ್ಮೆ ಸ್ಪೋಟ
ಅಲ್ಲದೇ ಮೂರು ತಿಂಗಳಿಗೆ ಒಮ್ಮೆ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಬಂಡೆಗಳನ್ನು ಸ್ಪೋಟಿಸಲಾಗುತ್ತಿತ್ತು. ನಿನ್ನೆಯೂ ತಮಿಳುನಾಡಿ ನಿಂದ ಅಪಾರ ಪ್ರಮಾಣದಲ್ಲಿ ಜಿಲೆಟಿನ್ ಕಡ್ಡಿಗಳನ್ನು ತರಲಾಗಿದೆ ಎನ್ನಲಾಗುತ್ತಿದೆ.
ಸಿಗರೇಟ್ ನಿಂದ ಸಿಡಿಯಿತಾ ಸ್ಪೋಟಕ ..?
ತಮಿಳುನಾಡಿನಿಂದ ನಿನ್ನೆ ಬೊಲೆರೋ ವಾಹನದ ಮೂಲಕ ಅಪಾರ ಪ್ರಮಾಣದ ಜಿಲೆಟಿನ್ ಕಡ್ಡಿಗಳನ್ನು ತರಲಾಗಿತ್ತು. ಗಣಿಗಾರಿಕಾ ಪ್ರದೇಶದಲ್ಲಿ ಜಿಲೆಟಿನ್ ತುಂಬಿದ್ದ ವಾಹನ ನಿಂತುಕೊಂಡಿತ್ತು. ವಾಹನದಲ್ಲಿದ್ದವರು ಬೀಡಿ ಹಾಗೂ ಸಿಗರೇಟ್ ಸೇದುತ್ತಿದ್ದರು. ಇದೇ ಸಿಗರೇಟ್ ನಿಂದಲೇ ಸ್ಪೋಟ ಉಂಟಾಗಿರಬಹುದು ಎಂದು ಶಂಕಿಸಲಾಗುತ್ತಿದೆ.

ಚಿಕ್ಕಮಗಳೂರಲ್ಲೂ ನಿಗೂಢ ಸ್ಪೋಟ..!
ಶಿವಮೊಗ್ಗ ಜಿಲ್ಲೆಯಲ್ಲಿ ಕ್ರಷರ್ ನಲ್ಲಿ ಉಂಟಾಗಿದ್ದ ಸ್ಪೋಟ ಜಿಲ್ಲೆಯ ಬಹುತೇಕ ಜನರಿಗೆ ಸದ್ದು ಕೇಳಿಸಿತ್ತು. ಮಾತ್ರವಲ್ಲ ನಿನ್ನೆ ರಾತ್ರಿಯ ಸುಮಾರಿಗೆ ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆಗಳಲ್ಲಿ ನಿಗೂಢ ಸ್ಪೋಟದ ಸದ್ದು ಕೇಳಿಬಂದಿದೆ. ಹಣಸೋಡು ಸ್ಪೋಟದ ಸದ್ದು ಚಿಕ್ಕಮಗಳೂರು ಜಿಲ್ಲೆಯ ವರೆಗೂ ವ್ಯಾಪಿಸಿತ್ತಾ. ಇಲ್ಲಾ ಬೇರೆಯ ಸ್ಪೋಟ ನಡೆದಿದೆಯಾ ಅನ್ನೋ ಕುರಿತು ತನಿಖೆ ನಡೆಸುತ್ತಿದೆ. ಅಲ್ಲದೇ ಹುಣಸೋಡು ಸ್ಪೋಟ ನಡೆದ ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳದವರನ್ನು ಕರೆಯಿಸಲಾಗುತ್ತಿದ್ದು, ತಜ್ಞರು ಈ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.