ಉಡುಪಿ : ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್ ಮಹಾರಾಷ್ಟ್ರ ಸಮೀಪದಲ್ಲಿ ಮುಳುಗಡೆಯಾಗಿದೆ. ಬೋಟಿನಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಉಡುಪಿಯ ಮಲ್ಪೆಯ ಹನುಮಾನ್ ನಗರದ ತಾರಾನಾಥ್ ಕುಂದರ್ ಮಾಲಿಕತ್ವದ ಮಥುರಾ ಹೆಸರಿನ ಆಳ ಸಮುದ್ರದ ಬೋಟ್ ನವೆಂಬರ್ 17ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮಹಾರಾಷ್ಟ್ರ – ಗೋವಾ ನಡುವಿನ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆಯಲ್ಲಿ ಬೋಟಿನ ತಳಭಾಗದಲ್ಲಿ ರಂಧ್ರವಾಗಿದ್ದು, ನೀರು ನುಗ್ಗಿದೆ. ಈ ವೇಳೆಯಲ್ಲಿ ಪಕ್ಕದಲ್ಲಿದ್ದ ಮಾಹೋರ್ ಹೆಸರಿನ ಬೋಟಿನವರು ಮೀನುಗಾರರನ್ನು ರಕ್ಷಿಸಿದ್ದಾರೆ.
ಬೋಟಿನ ತಳಭಾಗದಿಂದ ಸಂಪೂರ್ಣವಾಗಿ ನೀರು ನುಗ್ಗಿದ್ದರಿಂದಾಗಿ ಬೋಟ್ ಭಾಗಶಃ ಮುಳುಗಡೆಯಾಗಿದೆ. ಬೋಟ್ ಮುಳುಗಡೆ ಯಾಗಿದ್ದರಿಂದಾಗಿ ಸುಮಾರು 65 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎನ್ನಲಾಗುತ್ತಿದೆ.