ಸಚಿವ ಸಂಪುಟ ವಿಸ್ತರಣೆ ಸಂಕಟ…! ಸಿಎಂ ಹೆಗಲಿನ ಭಾರ ಎಂದ ರಾಜ್ಯಾಧ್ಯಕ್ಷರು…!!

ಉಡುಪಿ : ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಸಂಕಟ ಮುಂದುವರೆದಿದ್ದು, ಒಂದೆಡೆ ಸಿಎಂ ಮೇಲೆ ಆಕಾಂಕ್ಷಿಗಳ ಮುನಿಸು ಹೆಚ್ಚುತ್ತಿದ್ದರೇ, ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಎಲ್ಲಾ ಸಿಎಂ ನಿರ್ಧಾರ ಎನ್ನುವ ಮೂಲಕ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

ಸರ್ಕಾರ ರಚನೆಗೆ ಪರೋಕ್ಷ ಕಾರಣರಾದ ಎಂಟಿಬಿ ನಾಗರಾಜ್ ಸೇರಿದಂತೆ ಹಲವು ಶಾಸಕರು ಸಚಿವರಾಗೋ ಕನಸಿನಲ್ಲಿ ಹಗಲು ರಾತ್ರಿ ಸಂಪುಟ ವಿಸ್ತರಣೆಯ ಜಪಮಾಡ್ತಿದ್ದಾರೆ. ಸಂಪುಟ ಪುನರ್ ರಚನೆಯೋ, ವಿಸ್ತರಣೆಯೋ ಬೇಗ ಆದರೇ ಸಾಕಪ್ಪ ಅಂತ ಕಾಯ್ತಿದ್ದಾರೆ. ಆದರೇ ಪ್ರತಿಭಾರಿ ದೆಹಲಿಗೆ ಹೋದ ಸಿಎಂ ಬಿಎಸ್ವೈ ಖಾಲಿ ಕೈಯಲ್ಲಿ ವಾಪಸ್ಸಾಗ್ತಿದ್ದಾರೆ. ಹೀಗಾಗಿ ನಿಧಾನವಾಗಿ ಸಚಿವ ಸ್ಥಾನದ ಆಸೆ ಅಸಮಧಾನವಾಗಿ ಬದಲಾಗುತ್ತಿದೆ. ಅಷ್ಟೇ ಅಲ್ಲ ಈ ಎಲ್ಲ ಅಸಮಧಾನಕ್ಕೆ ಸಿಎಂ ಬಿಎಸ್ವೈ ಕಾರಣ ಎಂಬ ಭಾವನೆಯೂ ದಟ್ಟವಾಗತೊಡಗಿದೆ.

ಇಂಥ ಪರಿಸ್ಥಿತಿಯಲ್ಲಿ ಸಿಎಂ ಬಿಎಸ್ವೈ ಪರ ನಿಂತು ಸಚಿವ ಸ್ಥಾನದ ಆಕಾಂಕ್ಷಿಗಳನ್ನು ಸಮಾಧಾನ ಪಡಿಸಿ ಸಚಿವ ಸಂಪುಟ ವಿಸ್ತರಣೆಯ ಅವಶ್ಯಕತೆಯನ್ನು ಹೈಕಮಾಂಡ್ ಗೆ ಅರ್ಥ ಮಾಡಿಸಬೇಕಾದ ಹೊಣೆಗಾರಿಕೆ ಇರೋ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಧ್ಯಮಗಳ ಜೊತೆ ತಮಗೇನೂ ಸಂಬಂಧವೇ ಇಲ್ಲ ಎಂಬರ್ಥದಲ್ಲಿ ಮಾತನಾಡಿ ಮತ್ತಷ್ಟು ಅಸಮಧಾನ ಹೆಚ್ಚಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕಟೀಲ್, ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಕೇಂದ್ರ ನಾಯಕರ ಜೊತೆ ಚರ್ಚಿಸಿ ಸಿಎಂ ನಿರ್ಧಾರ ಮಾಡುತ್ತಾರೆ ಎನ್ನುವ ಮೂಲಕ ಎಲ್ಲವೂ ಸಿಎಂ ಕೈಯಲ್ಲಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಅಷ್ಟೇ ಅಲ್ಲ ಸಮಯ ಬಂದಾಗ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎನ್ನುವ ಮೂಲಕ ಅಡ್ಡಗೋಡೆಯಮೇಲೆ ದೀಪ ಇಟ್ಟಂತೆ ಉತ್ತರಿಸಿದ್ದು ಸಚಿವ ಸ್ಥಾನದ ನೀರಿಕ್ಷೆಯಲ್ಲಿರುವ ಹಾಗೂ ಸಂಪುಟ ಸೇರೋ ಆಸೆಯಲ್ಲಿರೋರಿಗೆ ಅಸಮಾಧಾನ ಹೆಚ್ಚಿಸಿದೆ. ಪಕ್ಷಕ್ಕೆ ಸೇರಿಸಿಕೊಳ್ಳುವಾಗ, ಸರ್ಕಾರ ರಚಿಸುವಾಗ, ಚುನಾವಣೆಗೆ ನಿಲ್ಲಿಸುವಾಗ ರಾಜ್ಯಾಧ್ಯಕ್ಷರು ಮನವೊಲಿಸುತ್ತಾರೆ. ಆದರೇ ಅಧಿಕಾರ ಕೊಡೋ ಪ್ರಶ್ನೆ ಬಂದಾಗ ಎಲ್ಲರೂ ಸಿಎಂರನ್ನೇ ಹೊಣೆ ಮಾಡಿ ಎಸ್ಕೇಪ್ ಆಗೋ ಪ್ರಯತ್ನ ಮಾಡ್ತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರು, ಹೈಕಮಾಂಡ್ ಹಾಗೂ ಸಿಎಂ ನಡುವಿನ ಮುಸುಕಿನ ಗುದ್ದಾಟದಲ್ಲಿ ನಾವು ಸಚಿವ ಸ್ಥಾನದ ನೀರಿಕ್ಷೆಯಲ್ಲೇ ಸರ್ಕಾರದ ಅವಧಿ ಮುಗಿಯೋ ಆತಂಕವಿದೆ ಎಂದು ಕೆಲ ಶಾಸಕರು ಬಹಿರಂಗವಾಗಿಯೇ ತಮ್ಮ ಕೋಪ ತೋಡಿಕೊಳ್ಳುತ್ತಿದ್ದಾರೆ.

ಕೇಂದ್ರದಲ್ಲಿ ಅನುದಾನ ಕುರಿತು ಮಾತುಕತೆ ಗೆ ರಾಜ್ಯದ ಸಚಿವರು ದೆಹಲಿಗೆ ಹೋಗುತ್ತಾರೆ. ಈ ವೇಳೆ ಕೇಂದ್ರದ ನಾಯಕರ ಭೇಟಿ ಮಾಡುತ್ತಾರೆ. ಇದಕ್ಕೆಲ್ಲ ವಿಶೇಷ ಅರ್ಥ ಬೇಡ ಎನ್ನುವ ಮೂಲಕ ನಳಿನ್ ಕುಮಾರ್ ಕಟೀಲ್ ಸಚಿವ ಸಂಪುಟ ವಿಸ್ತರಣೆ ಹಾಗೂ ಇದರಿಂದ ಸೃಷ್ಟಿಯಾಗಿರುವ ರಾಜಕೀಯ ಚಟುವಟಿಕೆಗಳನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆ ಎಂಬ ಆರೋಪವೂ ಬಿಜೆಪಿ ಶಾಸಕ ರಿಂದಲೇ ಕೇಳಿಬಂದಿದ್ದು ರಾಜ್ಯಾಧ್ಯಕ್ಷರ ಲಘುದಾಟಿಯ ಹೇಳಿಕೆಗೆ ಅಕ್ರೋಶ ವ್ಯಕ್ತವಾಗಿದೆ.

Comments are closed.