ರಾಜ್ಯದಲ್ಲಿ ತಾಲೂಕು ಪಂಚಾಯತಿ ರದ್ದು : ಬದಲಾಗುತ್ತೆ ಪಂಚಾಯತ್ ವ್ಯವಸ್ಥೆ ..!

ಬೆಂಗಳೂರು : ರಾಜ್ಯದಲ್ಲಿ ಮೂರು ಹಂತದ ಪಂಚಾಯತ್ ವ್ಯವಸ್ಥೆಯ ಬದಲು, ಕೇವಲ 2 ಹಂತದ ಪಂಚಾಯತ್ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸರಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತಿ ವ್ಯವಸ್ಥೆಯನ್ನೇ ರದ್ದು ಮಾಡಲು ಸರಕಾರ ನಿರ್ಧಾರ ಮಾಡಿದೆ.

ವಿಧಾನಸಭಾ ಅಧಿವೇಶನದ ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ ಈ ವಿಷಯ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ, ರಾಜ್ಯದಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯ್ತಿ ವ್ಯವಸ್ಥೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯತಿ ವ್ಯವಸ್ಥೆಯನ್ನು ಉಳಿಸಿಕೊಂಡು ತಾಲೂಕು ಪಂಚಾಯಿತಿಯನ್ನು ರದ್ದುಗೊಳಿಸಲಾಗುವುದು ಎಂದಿದ್ದಾರೆ.

ಹೆಚ್ಚಿನ ಅನುದಾನಗಳು ಲಭ್ಯವಾಗದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿಗಳು ನಿರುಪಯುಕ್ತವಾಗಿದೆ. ಒಂದೊಮ್ಮೆ ತಾಲೂಕು ಪಂಚಾಯತಿ ವ್ಯವಸ್ಥೆಯನ್ನು ಕೈಬಿಟ್ಟರೆ ಆಡಳಿತಾತ್ಮಕ ಅನುಕೂಲತೆ ಯ ಜೊತೆ ಜೊತೆಗೆ ಆರ್ಥಿಕ ಹೊಡೆತವೂ ತಪ್ಪುತ್ತದೆ. ಸಂವಿಧಾನದ ತಿದ್ದುಪಡ ಮಾಡಿ ರಾಜ್ಯದಲ್ಲಿ 2 ಹಂತದ ಪಂಚಾಯತ್ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಹಲವು ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.


ಸಂವಿಧಾನದ 243ನೇ ಪರಿಚ್ಛೇದದ 73ನೇ ತಿದ್ದುಪಡಿ ಅನ್ವಯ ಮೂರು ಹಂತಗಳ ಪಂಚಾಯತ್ರಾಜ್ ವ್ಯವಸ್ಥೆ ಜಾರಿಯಲ್ಲಿದೆ. ಆದರೆ 20 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯಿರುವ ರಾಜ್ಯಗಳಿಗೆ ವಿನಾಯಿತಿ ಇದೆ. ರಾಜ್ಯದಲ್ಲೂ ಎರಡು ಹಂತದ ಪಂಚಾಯತ್ ವ್ಯವಸ್ಥೆ ಸೂಕ್ತ ಎಂಬ ಅಭಿಪ್ರಾಯ ಹಲವು ಸದಸ್ಯರದು. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಬಳಿಕ ಕೇಂದ್ರ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಈ ಬಗ್ಗೆ ಸಚಿವ ಸಂಪುಟದಲ್ಲೂ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಶಾಸಕರು ಅಭಿಪ್ರಾಯ ತಿಳಿಸಿದರೆ ಸಂಪುಟದಲ್ಲಿ ಚರ್ಚಿಸಲು ಅನುಕೂಲವಾಗಲಿದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Comments are closed.