ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚನೆ : ಪ್ಲ್ಯಾನ್ ಮಾಡಿ ವಂಚಕರನ್ನು ಸೆರೆ ಹಿಡಿದ ಬ್ಯಾಂಕ್ ಸಿಬ್ಬಂದಿ..!

ಮಂಗಳೂರು : ಕರಾವಳಿ ಭಾಗದಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದು ವಂಚಿಸುವ ವಂಚಕರ ಜಾಲ ಸಕ್ರೀಯವಾಗಿದೆ. ಅಂತೆಯೇ ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಚಿನ್ನಾಭರಣ ಪರಿಶೀಲನೆ ವೇಳೆಯಲ್ಲಿ ಲಕ್ಷಾಂತರ ಮೌಲ್ಯದ ನಕಲಿ ಚಿನ್ನ ಅಡವಿಟ್ಟಿರುವುದು ಬೆಳಕಿಗೆ ಬಂದಿದೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸೊಸೈಟಿಯೊಂದರಲ್ಲಿ ವ್ಯಕ್ತಿಯೋರ್ವ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆಯುವ ವೇಳೆಯಲ್ಲಿ ಬಂಧನಕ್ಕೊಳಗಾದ ಘಟನೆಯ ಬೆನ್ನಲ್ಲೇ ಹಲವು ಚಿನ್ನಾಭರಣ ಅಡವಿಟ್ಟು ಸಾಲ ನೀಡಿದ ಹಲವು ಸೊಸೈಟಿಗಳು ಎಚ್ಚೆತ್ತುಕೊಂಡಿದ್ದವು. ಅಂತೆಯೇ ಮಂಗಳೂರಿನ ಹಲವಡೆ ಶಾಖೆಗಳನ್ನು ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಅಡವಿರಿಸಿಕೊಂಡಿದ್ದ ಚಿನ್ನಾಭರಣಗಳ ಪರಿಶೀಲನೆಗೆ ಮುಂದಾಗಿದೆ.

ತೆನ್ನಲ್ಲಾ ಶಾಖೆಗಳಲ್ಲಿನ ಚಿನ್ನಾಭರಣಗಳನ್ನು ಪರಿಶೀಲನೆ ನಡೆಸಿದಾಗ ಬೆಂದೂರು ವೆಲ್ ಶಾಖೆ ಹಾಗೂ ಮುಡಿಪು ಶಾಖೆಯಲ್ಲಿ ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆದಿರೋದು ಬಯಲಿಗೆ ಬಂದಿದೆ. ಕೂಡಲೇ ಎಚ್ಚೆತ್ತ ಬ್ಯಾಂಕ್ ಸಿಬ್ಬಂದಿ ಚಿನ್ನಾಭರಣ ಅಡವಿಟ್ಟಿರುವ ವ್ಯಕ್ತಿಗಳಿಗೆ ಕರೆ ಮಾಡಿ ಬ್ಯಾಂಕಿಗೆ ಬಂದು ಸಹಿ ಹಾಕಿ ಹೋಗುವಂತೆ ತಿಳಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿಗಳ ಉಪಾಯವನ್ನರಿಯದ ಆಸಾಮಿಗಳು ಬ್ಯಾಂಕಿಗೆ ಬಂದು ಪೊಲೀಸರ ಕೈಯಲ್ಲಿ ಸೆರೆಯಾಗಿದ್ದಾರೆ.

ತಾವು ಬ್ಯಾಂಕುಗಳಲ್ಲಿ ಅಡವಿಡುವ ನಕಲಿ ಚಿನ್ನಕ್ಕೆ ಹೊರಗಡೆಯಿಂದ ಎರಡು ಹಂತಗಳಲ್ಲಿ ಚಿನ್ನದ ಲೇಯರ್ ಬಳಕೆ ಮಾಡುತ್ತಿದ್ದಾರೆ. ಸಾಲ ನೀಡುವಾಗ ಚಿನ್ನಾಭರಣಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ಅದು ನಕಲಿ ಅನ್ನೋದು ಗೊತ್ತೆ ಆಗೋದಿಲ್ಲ. ಹೀಗಾಗಿಯೇ ನಕಲಿ ಚಿನ್ನವನ್ನು ಅಸಲಿಯೆಂದು ಬಾವಿಸಿ ಲಕ್ಷಾಂತರ ರೂಪಾಯಿ ಸಾಲ ನೀಡಲಾಗುತ್ತಿದೆ. ಕೇರಳದಲ್ಲಿ ಇಂತಹವೊಂದು ಜಾಲ ಸಕ್ರೀಯವಾಗಿರುವ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಬಂಧಿತರರು ಕೇರಳ ಮೂಲದವರಾಗಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ನಕಲಿ ಚಿನ್ನ ಅಡವಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ದ 3 ಪೊಲೀಸ್ ಠಾಣೆಗಳಲ್ಲಿ ಒಟ್ಟು 6 ಪ್ರಕರಣ ದಾಖಲಾಗಿದೆ. ನಕಲಿ ಚಿನ್ನ ಅಡವಿಟ್ಟ ಜಾಲದಲ್ಲಿ ಇನ್ನೂ ಹಲವರು ಬಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದ್ದು, ಪೊಲೀಸರು ಈ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ. ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ನೀಡಿರುವ ಸಹಕಾರಿ ಸಂಘಗಳು ಹಾಗೂ ಬ್ಯಾಂಕುಗಳ ಚಿನ್ನಾಭರಣಗಳ ಪರಿಶೀಲನೆ ನಡೆಸುವಂತೆಯೂ ಪೊಲೀಸರು ಮನವಿ ಮಾಡಿದ್ದಾರೆ.

Comments are closed.