ರಾಜ್ಯದಲ್ಲಿ ಸಂಚಲನ ಮೂಡಿಸಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಕಾರಣವಾದ ಸಿಡಿ ಪ್ರಕರಣ ಹಾಗೂ ಕೆಲಸ ಕೊಡಿಸುವುದಾಗಿ ವಂಚಿಸಿದ ಪ್ರಕರಣ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮನಾ? ಇಂತಹದೊಂದು ಅನುಮಾನಕ್ಕೆ ಕಾರಣವಾಗಿರೋದು ಸಿಡಿ ಲೇಡಿ ನಡೆ. ನಿನ್ನೆ ಹೇಳಿಕೆ ನೀಡಲು ಆಗಮಿಸಿದ ಯುವತಿ ಸಂಚಾರಕ್ಕೆ ಕಾಂಗ್ರೆಸ್ ನಾಯಕರ ಆಪ್ತರ ಕಾರು ಬಳಕೆ ಮಾಡಿದ್ದು, ಅನುಮಾನಕ್ಕೆ ಪುಷ್ಠಿ ನೀಡಿದೆ.

ಹಲವಾರು ಭಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಸಿಡಿಲೇಡಿ ಕೊನೆಗೂ ನಿನ್ನೆ ನ್ಯಾಯಾಧೀಶರ ಎದುರು ತಮ್ಮ ಹೇಳಿಕೆ ದಾಖಲಿಸಿದ್ದಾಳೆ. ಆದರೆ ನ್ಯಾಯಾಧೀಶರ ಎದುರು ಹೇಳಿಕೆ ದಾಖಲಿಸಿ ಎಸ್ಐಟಿ ವಿಚಾರಣೆಗೆ ಹಾಜರಾಗಿ ಅಜ್ಞಾತ ಸ್ಥಳಕ್ಕೆ ತೆರಳಿದ ಸಿಡಿ ಲೇಡಿಗೆ ಕಾಂಗ್ರೆಸ್ ನ ಅಘೋಷಿತ ಬೆಂಬಲ ಇದೆ ಅನುಮಾನ ಎಲ್ಲೆಡೆ ಹರಿದಾಡುತ್ತಿದೆ.

ನಿನ್ನೆ ನಗರಕ್ಕೆ ಆಗಮಿಸಿದ ಸಿಡಿ ಲೇಡಿ ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರೀಸ್ ಪುತ್ರ ಹಾಗೂ ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ್ ಸ್ನೇಹಿತನ ಕಾರನ್ನು ಓಡಾಟಕ್ಕೆ ಬಳಸಿದ್ದಾರೆ. ಈ ಸಾಕ್ಷಿಯೂ ಕಾಂಗ್ರೆಸ್ ಯುವತಿಯ ಬೆಂಬಲಕ್ಕಿದೆ ಎಂಬುದನ್ನು ಸಾಕ್ಷಿಕರಿಸುತ್ತಿದೆ.

ಸಂತ್ರಸ್ಥೆ ಯುವತಿ ನಿನ್ನೆ ಹೇಳಿಕೆ ನೀಡಲು ಫಾರ್ಚೂನರ್ ಸಿಗ್ಮಾ-4 ಕಾರಿನಲ್ಲಿ ಆಗಮಿಸಿದ್ದಳು. ಕಾರ್ ರಜಿಸ್ಟರ್ ನಂಬರ್ ಕೆಎ-04 ಎಂಯು9232 ಆಗಿದ್ದು, ಈ ಕಾರು ಕಾಂಗ್ರೆಸ್ ನ ಯುವ ನಾಯಕ ನಲಪಾಡ್ ಆಪ್ತ ಮೊಹ್ಮಮದ್ ನಾಸೀರ್ ಗೆ ಸೇರಿದ್ದು, ಈತ ವಿದ್ವತ್ ಹಲ್ಲೆ ಪ್ರಕರಣದಲ್ಲಿ ಎ3 ಆರೋಪಿಯಾಗಿದ್ದ ಅನ್ನೋದು ಕೂಡ ಇಲ್ಲಿ ಗಮನಿಸಬೇಕಾದ ಅಂಶ.

ಹೀಗಾಗಿ ಡಿಕೆಶಿ ಎಷ್ಟೇ ತಳ್ಳಿಹಾಕಿದರೂ ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್, ಮೊಹಮ್ಮದ್ ನಲಪಾಡ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಸಹಕಾರ,ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಯುವತಿಯ ಬೆನ್ನ ಹಿಂದಿದೆ ಎಂಬುದು ಸಾಬೀತಾಗುತ್ತಿದ್ದು, ಇದಕ್ಕೆ ಕಾಂಗ್ರೆಸ್ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಅನ್ನೋದನ್ನು ಕಾದು ನೋಡಬೇಕಿದೆ.