ಚಿಕ್ಕಮಗಳೂರು : ಒಂಟಿ ಮನೆಯೊಂದಕ್ಕೆ ತಡರಾತ್ರಿ ನುಗ್ಗಿದ 20 ಮಂದಿ ದರೋಡೆಕೋರರು ಮನೆಯಲ್ಲಿದ್ದ ನಾಲ್ವರನ್ನು ಕಟ್ಟಿಹಾಕಿ ದರೋಡೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೆತೋಟದಲ್ಲಿ ನಡೆದಿದೆ.

ವಿಜಯರಾಘವ ಎಂಬವರ ಮನೆಯ ಮೇಲೆ ನಿನ್ನೆ ತಡರಾತ್ರಿ 11.30ರ ಸುಮಾರಿಗೆ ಯಾರೋ ಬಾಗಿಲು ಬಡಿದಿದ್ದಾರೆ. ಪರಿಚಿತರೇ ಬಂದಿರಬೇಕೆಂದು ಮನೆಯ ಬಾಗಿಲು ತೆರೆದಿದ್ದಾರೆ. ಕೂಡಲೇ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಬರೋಬ್ಬರಿ 20 ಮಂದಿ ದರೋಡೆಕೋರರ ತಂಡ ಮನೆಯೊಳಗೆ ನುಗ್ಗಿದೆ. ಮನೆಯಲ್ಲಿದ್ದ ನಾಲ್ವರ ಬಾಯಿಗೆ ಪ್ಲಾಸ್ಟರ್, ಬಟ್ಟೆ ಸುತ್ತಿ ಹಗ್ಗದಿಂದ ಹಾಕಿದ್ದ ಖತರ್ನಾಕ್ ತಂಡ ಚಿನ್ನ, ನಗದು ದೋಚಿದೆ. ರಾತ್ರಿ 11.30ಕ್ಕೆ ಮನೆಗೆ ಬಂದಿದ್ದ ದರೋಡೆಕೋರರು ರಾತ್ರಿ 2.30ರ ತನಕವೂ ಮನೆಯನ್ನೆಲ್ಲಾ ತಡಕಾಡಿದ್ದಾರೆ.

ಮನೆಯಲ್ಲಿ ಸಿಕ್ಕ ವಸ್ತುಗಳನ್ನೆಲ್ಲಾ ತೆಗೆದುಕೊಂಡು ದರೋಡೆಕೋರರ ತಂಡ ಪರಾರಿಯಾಗಿದೆ. ಘಟನೆಯಿಂದಾಗಿ ಮಲೆನಾಡಿಗರು ಬೆಚ್ಚಿ ಬಿದ್ದಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರೋ ಜಯಪುರ ಠಾಣೆಯ ಪೊಲೀಸರು ದರೋಡೆಕೋರರಿಗಾಗಿ ಬಲೆ ಬೀಸಿದ್ದಾರೆ.