ಬೆಂಗಳೂರು : ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ವೇಳೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕ್ರಿಸ್ಮಸ್ ವೇಳೆಯಲ್ಲಿ ಆಲಿಂಗನ ಹಾಗೂ ಹಸ್ತಲಾಘವ ಮಾಡೋದಕ್ಕೆ ನಿಷೇಧ ಹೇರಲಾಗಿದೆ.

ಕೇಂದ್ರ ಸರಕಾರ ಸೂಚನೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಲವು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಹೊಸ ವರ್ಚಾಚರಣೆಯ ಸಂಭ್ರಮದಲ್ಲಿ ಸಾಮೂಹಿಕ ಪಾರ್ಟಿ, ಸಾರ್ವಜನಿಕ ಸ್ಥಳ, ಹೆಚ್ಚು ಜನರಿರುವ ವಸತಿ ಸಮುಚ್ಚಯಗಳಲ್ಲಿ ಸಂಭ್ರಮಾಚರಣೆ ಯನ್ನು ಮಾಡುವುದಕ್ಕೆ ನಿಷೇಧಿಸಲಾಗಿದೆ. ಅಲ್ಲದೇ ಪಟಾಕಿಗೂ ನಿಷೇಧ ಹೇರಲಾಗಿದ್ದು, ಕೇವಲ ಹಸಿರು ಪಟಾಕಿಗಳನ್ನು ಮಾತ್ರವೇ ಹಚ್ಚುವಂತೆ ಸೂಚಿಸಿದೆ.

ಕ್ರಿಸ್ಮಸ್ ವೇಳೆಯಲ್ಲಿ ಚರ್ಚ್ ಗಳಲ್ಲಿ ಒಮ್ಮೆಲೆ ಹೆಚ್ಚು ಜನರು ಸೇರದಂತೆ ಸಾಮಾಜಿಕ ಅಂತರವನ್ನು ಕಾಪಾಡಲು ಮೇಲ್ವಿಚಾರಕರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಲಿಂಗನ ಹಾಗೂ ಹಸ್ತಲಾಘವ ಮಾಡುವುದನ್ನು ನಿಷೇಧಿಸಲಾಗಿದೆ.

ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಡಿಸೆಂಬರ್ 20 ರಿಂದ ಜನವರಿ 2ರ ವರೆಗೆ ಕ್ಲಬ್, ಪಬ್, ರೆಸ್ಟೋರೆಂಟ್ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದ್ದು, ಡಿಜೆ ಡ್ಯಾನ್ಸ್, ವಿಶೇಷ ಪಾರ್ಟಿಗಳನ್ನು ಆಯೋಜಿ ಸುವುದನ್ನು ನಿಷೇಧಿಸಲಾಗಿದೆ. ಇನ್ನು 65 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳು ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ ಧರಿಸುವುದು ಸೇರಿದಂತೆ ಹಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದ್ದು, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆಯೂ ಸೂಚಿಸಲಾಗಿದೆ.


ರಾಜ್ಯ ಸರಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯು ಡಿಸೆಂಬರ್ 20ರಿಂದ ಜನವರಿ 2ರ ವರೆಗೆ ಜಾರಿಯಲ್ಲಿರಲಿದೆ. ಬಿಬಿಎಂಪಿ ಆಯುಕ್ತರು, ಪೊಲೀಸರು ಆಯುಕ್ತರು, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಇಲಾಖೆಯ ಮುಖ್ಯಸ್ಥರು ಹಾಗೂ ಪ್ರಾಧಿಕಾರಿಗಳು ಕಟ್ಟುನಿಟ್ಟಾಗಿ ಮಾರ್ಗಸೂಚಿಯನ್ನು ಅನುಷ್ಟಾನಗೊಳಿಸುವಂತೆ ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಆದೇಶಿಸಿದ್ದಾರೆ.