ತೀರ್ಥಹಳ್ಳಿ : ತೀರ್ಥಹಳ್ಳಿಯಿಂದ ಉಡುಪಿ ಮತ್ತು ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಂಜದಕಟ್ಟೆ ಸೇತುವೆ ಇದೀಗ ಕುಸಿಯುವ ಭೀತಿ ಯಲ್ಲಿದೆ. ಈ ಹಿನ್ನೆಲೆಯಲ್ಲಿ ಸೇತುವೆಯ ಮೇಲೆ ಕಲ್ಲುಗಳನ್ನು ಇರಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಸಂಪೂರ್ಣ ಕಡಿತ ವಾಗುವ ಸಾಧ್ಯತೆಯಿದೆ.

ಶಿವಮೊಗ್ಗ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಜನರು ಆರೋಗ್ಯದ ದೃಷ್ಟಿಯಿಂದ ಹಾಗೂ ನಾನಾ ಕಾರಣಗಳಿಂದಾಗಿ ನಿತ್ಯವೂ ಉಡುಪಿ ಮತ್ತು ಮಂಗಳೂರಿಗೆ ಭೇಟಿಯನ್ನು ಕೊಡುತ್ತಿದ್ದಾರೆ. ನಿತ್ಯವೂ ಸಾವಿರಾರು ವಾಹನಗಳು ಇದೇ ಮಾರ್ಗದಲ್ಲಿ ಸಂಚಾರ ಮಾಡುವುದರಿಂದಾಗಿ ದೊಡ್ಡ ಮಟ್ಟದ ಅಪಾಯ ಎದುರಾಗುವ ಭೀತಿ ಎದುರಾಗಿದೆ. ಸೇತುವೆ ಕುಸಿತದ ಭೀತಿಯಿಂದಾಗಿ ಈಗಾಗಲೇ ಸೇತುವೆಯ ಒಂದು ಭಾಗದಲ್ಲಿ ಮಾತ್ರವೇ ಓಡಾಟಕ್ಕೆ ಸ್ಥಳೀಯರು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಆದರೆ ಭಾರಿ ಮಳೆ ಸುರಿಯುತ್ತಿರುವುದರಿಂದಾಗಿ ಯಾವುದೇ ಸಂದರ್ಭದಲ್ಲಿಯೂ ಸೇತುವೆ ಕುಸಿಯುವ ಸಾಧ್ಯತೆಯಿದೆ.

ಶಿಥಿಲಾವಸ್ಥೆಗೆ ತಲುಪಿರುವ ಸೇತುವೆಯ ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಾಣ ಮಾಡುವ ಕುರಿತು ಅನುದಾನ ಬಿಡುಗಡೆಯಾಗಿದೆ ಯಾದ್ರೂ ಖಾಸಗಿ ವ್ಯಾಜ್ಯದಿಂದಾಗಿ ಸೇತುವೆ ನಿರ್ಮಾಣ ಸಾಧ್ಯವಾಗಿಲ್ಲ. ಈ ಕುರಿತು ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ಭಾರಿ ಅಪಾಯ ಎದುರಾಗೋದು ಗ್ಯಾರಂಟಿ.