ಮೈಸೂರು : ಒಂದೆಡೆ ಕೊರೊನಾ ಮಹಮಾರಿ ಅಟ್ಟಹಾಸವನ್ನು ಮೆರೆಯುತ್ತಿದ್ದರೆ ಇನ್ನೊಂದೆಡೆ ಹಕ್ಕಿಜ್ವರ ಜನರನ್ನು ಕಂಗಾಲಾಗಿಸಿದೆ. ಕೇರಳದಲ್ಲಿ ಕಾಣಿಸಿಕೊಂಡಿದ್ದ ಹಕ್ಕಿ ಜ್ವರ ಇದೀಗ ರಾಜ್ಯಕ್ಕೂ ಕಾಲಿರಿಸಿದೆ. ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರೋ ಬೆನ್ನಲ್ಲೇ ಮನೆಯಲ್ಲಿ ಸಾಕಿರುವ ಎಲ್ಲಾ ಹಕ್ಕಿಗಳನ್ನು ಕೊಲ್ಲು ಮೈಸೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಹಕ್ಕಿಜ್ವರದ ಕುರಿತು ಲ್ಯಾಬ್ ರಿಪೋರ್ಟ್ ಬರುತ್ತಿದ್ದಂತೆಯೇ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಕ್ಕಿಜ್ವರ ಇರುವುದನ್ನು ಖಚಿತಪಡಿಸಿದ್ದಾರೆ. ಅಲ್ಲದೇ ಮೈಸೂರು ನಗರದಲ್ಲಿ ಕೋಳಿ ಮಾರಾಟವನ್ನು ಬಂದ್ ಮಾಡಲಾಗಿದ್ದು, ಕುಂಬಾರಕೊಪ್ಪಲು ಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಕೊಳಿ ಮಾರಾಟ ನಿಷೇಧಿಸಲಾಗಿದೆ.

1 ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿ, ಗಿಳಿ, ಪಾರಿವಾಳ, ಲವ್ ಬರ್ಡ್ಸ್, ಬಾತುಕೋಲಿ, ಕೊಕ್ಕರೆ ಸೇರಿದಂತೆ ಎಲ್ಲಾ ಸಾಕುವ ಹಕ್ಕಿಗಳನ್ನು ಕಲ್ಲಿಂಗ್ ಆಪರೇಷನ್ ಮೂಲಕ ಕೊಲ್ಲಲು ಆದೇಶಿಸಿದೆ.

ಪ್ರತೀ ಮನೆಯಲ್ಲಿಯೂ ಸರ್ವೆ ಕಾರ್ಯವನ್ನು ನಡೆಸಿ, ಸಾಕಿರುವ ಹಕ್ಕಿಗಳನ್ನು ಸಂಗ್ರಹಿಸಲಾಗುತ್ತದೆ. ನಂತರ ಒಂದೆಡೆ ಕಲ್ಲಿಂಗ್ ಆಪರೇಷನ್ ನಡೆಸಲಾಗುತ್ತದೆ. ಕಲ್ಲಿಂಗ್ ಆಪರೇಷನ್ ನಲ್ಲಿ ಭಾಗಿಯಾಗುವ ಅಧಿಕಾರಿಗಳನ್ನು ಸಹ ಏಳು ದಿನಗಳ ಕಾಲ ನಿಗಾದಲ್ಲಿ ಇಡಲಾಗುವುದು.

ಏಳು ದಿನದ ಕಾಲ ಕಲ್ಲಿಂಗ್ ಆಪರೇಷನ್‌ನಲ್ಲಿ ತೊಡಗಿದವರು ಮನೆಗೆ ಹೋಗುವಂತಿಲ್ಲ. ಆಪರೇಷನ್ ಮುಗಿದ ನಂತರ ಅವರನ್ನ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಕಲ್ಲಿಂಗ್ ಆಪರೇಷನ್ ದೃಶ್ಯಗಳನ್ನ ಸೆರೆಹಿಡಿಯುವಂತಿಲ್ಲ ಎಂದು ಮೈಸೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.