ಬೆಂಗಳೂರು : ಡೆಡ್ಲಿ ಕೊರೊನಾ ವೈರಸ್ ವಿರುದ್ದ ಎಲ್ಲೆಡೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೊರೊನಾ ಭೀತಿಯಿಂದ ಕರ್ನಾಟಕ ಅಕ್ಷರಶಃ ಸ್ತಬ್ದವಾಗಿದೆ. ಆದರೂ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಕೊರೊನಾ ಪೀಡಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಸೋಮವಾರದ ವರೆಗೂ 8 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆದರೆ ಅಮೇರಿಕಾದಿಂದ ಮರಳಿದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಹೀಗಾಗಿ ಬೆಂಗಳೂರು ಹಾಗೂ ಕಲಬುರಗಿಯಲ್ಲಿ ತಲಾ ಓರ್ವರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಇದುವರೆಗೂ ರಾಜ್ಯದಲ್ಲಿ ಒಟ್ಟು 1,14,705 ಮಂದಿಯನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ದೇಶಕ್ಕೆ ಆಗಮಿಸಿದ 80,131 ಮಂದಿ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 29,069 ಮಂದಿ ಹಾಗೂ ಮಂಗಳೂರು ಮತ್ತು ಕಾರವಾರ ಬಂದರಿನಿಂದ 5,505 ಮಂದಿಯನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ.

ಈ ಪೈಕಿ 2,221 ಮಂದಿಗೆ ಶಂಕಿತ ಕೊರೊನಾ ಪತ್ತೆಯಾಗಿತ್ತು. 1830 ಮಂದಿಯನ್ನು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದ್ದು, ಅವರ ಮೇಲೆ ನಿಗಾ ಇರಿಸಲಾಗಿದೆ. 44 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ರಾಜ್ಯದಲ್ಲಿ ಕೊರೊನಾ ತಡೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಹಲವು ಜಿಲ್ಲಾಡಳಿತಗಳು ನಿಷೇಧಾಜ್ಞೆ ಹೊರಡಿಸೋ ಮೂಲಕ ಕೊರೊನಾ ವಿರುದ್ದ ಸಮರ ಸಾರಿವೆ. ಇನ್ನು ಮಂಗಳೂರು, ಕಲಬುರಗಿಯಲ್ಲಿ ಆರೋಗ್ಯ ತಪಾಸಣಾ ಲ್ಯಾಬ್ ತೆರೆಯಲು ಸರಕಾರ ಮುಂದಾಗಿದೆ.