ಕೊರೊನಾ ಲಸಿಕೆ ಪಡೆದವರಿಗೆ ಒಕ್ಕರಿಸಿದ ಮಹಾಮಾರಿ : ಚಾಮರಾಜನಗರದಲ್ಲಿ 5 ವೈದ್ಯರಿಗೆ ಕೊರೊನಾ ಪಾಸಿಟಿವ್..!

ಚಾಮರಾಜನಗರ : ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಪಡೆದ 5 ಮಂದಿ ವೈದ್ಯರು ಕೊರೊನಾ ಸೋಂಕಿಗೆ ತುತ್ತಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಜನವರಿ 16ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯ ವೈದ್ಯರಿಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಹಾಕಲಾಗಿತ್ತು. ಲಸಿಕೆ ಹಾಕಿಸಿದ 15 ದಿನಗಳ ಒಳಗೆ ವೈದ್ಯರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ವೈದ್ಯರನ್ನು ಹೋಮ್ ಐಸೋಲೇಶನ್ ಗೆ ಒಳಪಡಿಸಲಾಗಿದೆ.

ಲಸಿಕೆ ಪಡೆದಿರುವ 5 ಮಂದಿ ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇನ್ನೋರ್ವ ವೈದ್ಯರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಈ ಎಲ್ಲಾ ವೈದ್ಯರು ಮೊದಲ ಹಂತದ ಕೊರೊನಾ ಲಸಿಕೆಯನ್ನು ಪಡೆದುಕೊಂಡಿದ್ದು, 1 ದಿನಗಳ ನಂತರ ಎರಡನೇ ಹಂತದ ಲಸಿಕೆಯನ್ನು ಪಡೆದುಕೊಳ್ಳಲು ಬಾಕಿ ಉಳಿದಿದೆ. ಈ ನಡುವಲ್ಲೇ ವೈದ್ಯರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಕೊರೊನಾ ವೈರಸ್ ಸೋಂಕಿಗೆ ಲಸಿಕೆಯನ್ನು ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಸಲು ಸುಮಾರು ನಾಲ್ಕರಿಂದ 6 ವಾರಗಳ ಕಾಲಾವಕಾಶ ಬೇಕಾಗುತ್ತದೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ವೈದ್ಯರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಎಲ್ಲರನ್ನೂ ಐಸೋಲೇಷನ್ ಗೆ ಒಳಪಡಿಸಲಾಗಿದೆ. ಅಲ್ಲದೇ ವೈದ್ಯರ ಜೊತೆಗೆ ಸಂಪರ್ಕದಲ್ಲಿರುವವರನ್ನು ಕೂಡ ತಪಾಸಣೆಗೆ ಒಳಪಡಿಸಲಾಗಿದೆ.

ಇನ್ನು ಲಸಿಕೆ ಪಡೆದ ಕೂಡಲೇ ಕೊರೊನಾ ಸೋಂಕು ಹರಡೋದಿಲ್ಲಾ ಅನ್ನೋ ಭಾವನೆ ಸರಿಯಲ್ಲ. ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಸಲು ಸಮಯಾವಕಾಶ ಬೇಕಾಗಿರುವುದರಿಂದ ಕನಿಷ್ಠ 6 ವಾರಗಳ ಸಾಮಾಜಿಕ ಅಂತರವನ್ನು ಕಾಪಾಡಬೇಕು ಎಂದು ಚಾಮರಾಜನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರವಿ ಅವರು ತಿಳಿಸಿದ್ದಾರೆ.

Comments are closed.