ಬೆಂಗಳೂರು : ಕೊರೊನಾ ವೈರಸ್ ಸೋಂಕಿಗೆ ಹೆದರಿ ಕೊರೊನಾ ಸೋಂಕಿತ ವೃದ್ದ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 60 ವರ್ಷದ ವೃದ್ದೆ ತಡರಾತ್ರಿ 2.30ರ ಸುಮಾರಿಗೆ ತನ್ನ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ಕುಣಿಗಲ್ ಮೂಲದ ವೃದ್ದ ಮಹಿಳೆ ಬೆಂಗಳೂರಿನ ರಾಜಗೋಪಾಲನಗರದಲ್ಲಿ ವಾಸವಾಗಿದ್ದರು. ವೃದ್ದೆಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜೂನ್ 18ರಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ನಂತರದಲ್ಲಿ ವೃದ್ದೆಯ ಮಗ ಹಾಗೂ ಸೊಸೆಗೂ ಸೋಂಕು ಪತ್ತೆಯಾಗಿತ್ತು. ಇದರಿಂದಾಗಿ ವೃದ್ದೆ ಸಾಕಷ್ಟು ನೊಂದು ಹೋಗಿದ್ದರು ಎನ್ನಲಾಗುತ್ತಿದೆ.

ಇನ್ನು ಬೆಂಗಳೂರು ನಗರದ ಕೊರೊನಾ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಸರಿಯಾಗಿ ನಡೆಸಿಕೊಳ್ಳಲಾಗುತ್ತಿಲ್ಲ ಅನ್ನುವ ಆರೋಪವೂ ಇದೆ. ಈ ಹಿನ್ನೆಲೆಯಲ್ಲೀಗ ವೃದ್ದ ಮಹಿಳೆ ಮಾನಸಿಕ ಖಿನ್ನತೆಯಿಂದಲೇ ಸಾವನ್ನಪ್ಪಿದ್ದ, ಇಲ್ಲಾ ಆಸ್ಪತ್ರೆಯ ಅವ್ಯವಸ್ಥೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ್ರಾ ಅನ್ನುವ ಕುರಿತು ತನಿಖೆ ನಡೆಯುತ್ತಿದೆ. ಈ ಕುರಿತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.