ಲಾಕ್ ಡೌನ್ ಕುರಿತು ಅಂತಿಮ ನಿರ್ಧಾರ ಸಿಎಂ ತೆಗೆದುಕೊಳ್ಳಲಿ : ಮಾಜಿ ಸಿಎಂ ಎಚ್ಡಿಕೆ ಆಗ್ರಹ

0

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಸಿಎಂ ಲಾಕ್ ಡೌನ್ ಆದೇಶವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಆಯಾಯ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡುವುದು ಸರಿಯಲ್ಲ. ಜಿಲ್ಲಾಧಿಕಾರಿಗಳಿಂದ ಮಾಹಿತಿಯನ್ನು ಪಡೆದು ಅಂತಿಮವಾಗಿ ಮುಖ್ಯಮಂತ್ರಿಗಳೇ ಲಾಕ್ ಡೌನ್ ಕುರಿತು ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿ ಮಾಡುವುದರಿಂದ ಅದು ಪರಿಣಾಮಕಾರಿಯಾಗಲಾರದು. ಜನಸಾಮಾನ್ಯರು ಕೊರೊನಾ ಟೆಸ್ಟ್ ವರದಿಗೆ ಸ್ಯಾಂಪಲ್ಸ್ ನೀಡಿದ್ರೆ, ವರದಿ ಬರುವಾಗ 10 ದಿನಗಳೇ ಕಳೆಯುತ್ತಿದೆ. ಹೀಗಾದಾಗ ಕೊರೊನಾ ಸೋಂಕು ಇತರರಿಗೆ ಹರಡುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಟಫ್ ಲಾಕ್ ಡೌನ್ ಜಾರಿ ಮಾಡಬೇಕು. ಲಾಕ್ ಡೌನ್ ಜಾರಿ ಮಾಡುವ ಮೊದಲು ಜನಸಾಮಾನ್ಯರಿಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಬಡವರಿಗೆ ಆರೋಗ್ಯ ಸವಲತ್ತುಗಳನ್ನು ನೀಡುವ ನಿಟ್ಟಿನಲ್ಲಿ ಆರೋಗ್ಯ ಕಿಟ್ ಗಳನ್ನು ರಾಜ್ಯ ಸರಕಾರ ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಬೆಂಗಳೂರಿನಿಂದ ಹಳ್ಳಿಗಳಿಗೆ ವಲಸೆ ಹೋಗುತ್ತಿರುವುದರಿಂದಲೂ ಹೆಚ್ಚಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಕೊರೊನಾ ವೈರಸ್ ಸೋಂಕು ಹೆಚ್ಚಳವಾಗಿರುವುದರಿಂದ ರಾಜ್ಯ ಸರಕಾರ ನಿಯಂತ್ರಣ ಅಸಾಧ್ಯವೆಂದು ಕೈಚೆಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ. ರಾಜ್ಯ ಸರಕಾರವೇ ಕೈಚೆಲ್ಲಿದ್ರೆ ಜನರಿಗೆ ರಕ್ಷಣೆ ನೀಡುವವರಾರು ? ರಾಜ್ಯದಲ್ಲಿ ಸೋಂಕು ಸಮುದಾಯಕ್ಕೆ ಹರಡಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾರ್ಯೋನ್ಮುಖವಾಗಬೇಕಿದೆ. ಅಲ್ಲದೇ ಕೊರೊನಾ ಟೆಸ್ಟ್ ಗಳನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಾಡಬೇಕಾಗಿದೆ. ರಾಜ್ಯ ಸರಕಾರ ಜನ ಸಾಮಾನ್ಯರ ಜೀವದ ಜೊತೆಗೆ ಹುಡುಗಾಟವಾಡುವುದನ್ನು ನಿಲ್ಲಿಸಿ ತಜ್ಞರ ಸಲಹೆಯಂತೆ ಮುನ್ನಡೆಯುವುದು ಒಳಿತು ಎಂದಿದ್ದಾರೆ.

Leave A Reply

Your email address will not be published.