ಹನೋಯಿ : ವಿಶ್ವದ ಬಹುತೇಕ ರಾಷ್ಟ್ರಗಳು ಕೊರೊನಾ ಸೋಂಕಿನಿಂದ ತತ್ತರಿಸಿ ಹೋಗಿವೆ. ಆದ್ರೆ ವಿಶ್ವದ ಈ ದೇಶ ಮಾತ್ರ ಕೊರೊನಾ ವಿರುದ್ದ ಹೋರಾಟದಲ್ಲಿ ಗೆಲುವು ಕಂಡಿತ್ತು. ಆದ್ರೀಗ ಮೂರು ತಿಂಗಳ ಬಳಿಕ ಮೊದಲ ಕೊರೊನಾ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ.

ಹೌದು. ಪ್ರವಾಸಿಗರ ಪಾಲಿನ ಹಾಟ್ ಸ್ಪಾಟ್ ಎನಿಸಿಕೊಂಡಿರುವ ವಿಯೇಟ್ನಾಂ ದೇಶದಲ್ಲಿ ಕಳೆದ ಮೂರು ತಿಂಗಳಿನಿಂದಲೂ ಒಂದೇ ಒಂದು ಕೊರೊನಾ ಪ್ರಕರಣ ದಾಖಲಾಗಿರಲಿಲ್ಲ. ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ನಂತರದಲ್ಲಿ ವಿಯೇಟ್ನಾಂ ನಲ್ಲಿಯೂ ಕೊರೊನಾ ಸೋಂಕು ಪತ್ತೆಯಾಗಿತ್ತು. ದೇಶದಲ್ಲಿ ಒಟ್ಟು 417 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ವಿಯೇಟ್ನಾಂ ಸರಕಾರ ಕೊರೊನಾ ಸೋಂಕಿನ ವಿರುದ್ದ ಭಾರೀ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿತ್ತು.

ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ಬಂದ್ ಮಾಡಿತ್ತು. ಸಾಮಾಜಿಕ ಅಂತರ ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳಿಸಿತ್ತು. ಕೊರೊನಾ ಸೋಂಕಿತರೊಂದಿಗೆ ಯಾರೂ ಕೂಡ ಸಂಪರ್ಕ ಸಾಧಿಸದಂತೆ ಎಚ್ಚರಿಕೆಯನ್ನು ವಹಿಸಿತ್ತು. ಮಾತ್ರವಲ್ಲ ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ಕೊಡಿಸುವ ಕಾರ್ಯವನ್ನು ಮಾಡಿತ್ತು. ಹೀಗಾಗಿಯೇ ವಿಯೇಟ್ನಾಂ ನಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದವರೆಲ್ಲಾ ಗುಣಮುಖರಾಗಿ ಮನೆ ಸೇರಿದ್ದರು.

9,73,38,579 ಜನಸಂಖ್ಯೆಯನ್ನು ಹೊಂದಿರುವ ಪುಟ್ಟರಾಷ್ಟ್ರವಾಗಿರುವ ವಿಯೇಟ್ನಾಂ ತನ್ನ ದೇಶಕ್ಕೆ ಬರುವ ಪ್ರವಾಸಿಗರ ಮೇಲೆಯೂ ನಿರ್ಬಂಧವನ್ನು ಹೇರಿತ್ತು. ದೇಶದೊಳಗೆ ಬರುವುದಕ್ಕೆ ಹಾಗೂ ದೇಶದಿಂದ ಹೊರ ಹೋಗುವುದಕ್ಕೆ ಅವಕಾಶವನ್ನೇ ಕೊಟ್ಟಿಲ್ಲ. ಆದ್ರೀಗ ಸರಿ ಸುಮಾರು ಮೂರು ತಿಂಗಳ ಬಳಿಕ ವಿಯೇಟ್ನಾಂನಲ್ಲಿ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ.

ಸೆಂಟ್ರಲ್ ಡಾ ನಾಂಗ್ ನಗರದಲ್ಲಿ 57 ವರ್ಷದ ವ್ಯಕ್ತಿಗೆ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆಯಲ್ಲಿ ನಡೆಸಿದ ಕೊರೊನಾ ತಪಾಸಣೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ವ್ಯಕ್ತಿ ಕಳೆದೊಂದು ತಿಂಗಳಿನಿಂದಲೂ ಹೊರಗೆ ಪ್ರಯಾಣಿಸಿಲ್ಲ. ಆದರೂ ಕೊರೊನಾ ಸೋಂಕು ಹೇಗೆ ಪತ್ತೆಯಾಗಿದೆ ಅನ್ನುವ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ.

ಕೊರೊನಾ ಮುಕ್ತವಾಗಿದ್ದ ದೇಶದಲ್ಲಿಯೇ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಿಯೇಟ್ನಾಂ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದವರನ್ನು ಪ್ರತ್ಯೇಕಿಸುವ ಕಾರ್ಯವನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ. ಕುಟುಂಬ ಸದಸ್ಯರು ಸೇರಿದಂತೆ ಸುಮಾರು 100 ಮಂದಿಗೆ ಕೊರೊನಾ ತಪಾಸಣೆಯನ್ನು ನಡೆಸಿ ನಿಗಾ ಇರಿಸಲಾಗಿದೆ.

ವಿಯೇಟ್ನಾಂ ಕೊರೊನಾ ಸೋಂಕಿನ ವಿಚಾರದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ಕೈಗೊಂಡಿದೆ. ದೇಶದಲ್ಲಿ 418 ಕೊರೊನಾ ಪ್ರಕರಣ ಪತ್ತೆಯಾಗಿದ್ದರೂ ಕೂಡ ಯಾವುದೇ ಸಾವು ಸಂಭವಿಸಿಲ್ಲ. ಜೊತೆಗೆ ದೇಶವನ್ನು ಅಲ್ಲಿನ ಸರಕಾರ ಕೊರೊನಾ ಮುಕ್ತವಾಗಿಸಲು ಪಣತೊಟ್ಟಿದೆ. ಅಂತರಾಷ್ಟ್ರೀಯ ವಿಮಾನ ಸೇವೆ, ಪ್ರವಾಸಿಗರ ಮೇಲಿನ ನಿರ್ಬಂಧ ಸೇರಿದಂತೆ ಹಲವು ನಿಯಮಗಳನ್ನು ಹಾಗೆಯೇ ಮುಂದುವರಿಸಲಾಗುತ್ತಿದೆ. ಒಟ್ಟಿನಲ್ಲಿ ಕೊರೊನಾ ಮುಕ್ತವಾಗಿದ್ದ ವಿಯೇಟ್ನಾಂಗೆ ಇದೀಗ ಕೊರೊನಾ ಮತ್ತೆ ಶಾಕ್ ಕೊಟ್ಟಿದೆ.