ನವದೆಹಲಿ : ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಒಂದು ತಿಂಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಹೀಗಾಗಿ ಜುಲೈ ವರೆಗೂ ಲಾಕ್ ಡೌನ್ 5.0 ಜಾರಿಯಲ್ಲಿರಲಿದ್ದು, ಯಾವುದೇ ಪಾಸ್ ಇಲ್ಲದೇ ಅಂತರ್ ರಾಜ್ಯ ಸಂಚಾರ ಕೈಗೊಳ್ಳಬಹುದಾಗಿದೆ.

ಜೂನ್ 1ರಿಂದಲೇ ಹೊಸ ಲಾಕ್ ಡೌನ್ ಆದೇಶ ಜಾರಿಗೆ ಬರಲಿದೆ. ಲಾಕ್ ಡೌನ್ 5.0 ಅನ್ವಯ ರಾತ್ರಿ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ವರೆಗೆ ಇದ್ದ ಕರ್ಪ್ಯೂ ಅವಧಿಯನ್ನು ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕಡಿತ ಮಾಡಿದೆ. ಇನ್ನೊಂದು ತಿಂಗಳ ಕಾಲ ಮೆಟ್ರೋ ಸಂಚಾರ ಇರುವುದಿಲ್ಲ. ದೇಶದಾದ್ಯಂತ ಜೂನ್ 8ರಿಂದ ದೇಗುಲ, ಚರ್ಚ್, ಮಸೀದಿ ತೆರೆಯಲು ಅನುಮತಿಯನ್ನು ನೀಡಲಾಗಿದೆ.

ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದ್ದು, ಅಗತ್ಯ ವಸ್ತುಗಳ ಖರೀದಿಗಷ್ಟೇ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಜೂನ್ 8 ರಿಂದ ಹೋಟೆಲ್ ಹಾಗೂ ಶಾಪಿಂಗ್ ಮಾಲ್ ತೆರೆಯಲು ಅನುಮತಿಯನ್ನು ನೀಡಲಾಗಿದೆ. ಆದರೆ ಚಿತ್ರಮಂದಿರ ಸದ್ಯಕ್ಕೆ ಓಪನ್ ಆಗುವುದಿಲ್ಲ. ಜುಲೈ ನಂತರವೇ ಶಾಲೆ, ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡುವುದಾಗಿ ಹೇಳಿದೆ. ಮಾತ್ರವಲ್ಲ ಇನ್ನು ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ಸದ್ಯಕ್ಕೆ ಆರಂಭಿಸದಿರಲು ಕೇಂದ್ರ ಸರಕಾರ ನಿರ್ಧಾರ ಮಾಡಿದೆ.