3 ಹಂತಗಳಲ್ಲಿ ಲಾಕ್ ಡೌನ್ ತೆರವಿಗೆ ಮುಂದಾದ ಕೇಂದ್ರ ಸರಕಾರ

0

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಲಾಕ್ ಡೌನ್ ಆದೇಶವನ್ನು ಹಂತ ಹಂತವಾಗಿ ತೆರವುಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಈಗಾಗಲೇ ಅಗತ್ಯವಸ್ತುಗಳ ಖರೀದಿಯ ಜೊತೆಗೆ ಬಹುತೇಕ ಸೇವೆಗಳನ್ನು ಒದಗಿಸಲು ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದೀಗ ದೇಶವನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಮೂರು ಹಂತಗಳಲ್ಲಿ ಲಾಕ್ ಡೌನ್ ತೆರವುಗೊಳಿಸುವುದಾಗಿ ಕೇಂದ್ರ ಸರಕಾರ ಸೂಚಿಸಿದೆ.

ದೇಶದಾದ್ಯಂತ 4 ನೇ ಹಂತದ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದು, ನಾಳೆಗೆ ಲಾಕ್ ಡೌನ್ ಅವಧಿ ಮುಕ್ತಾಯಗೊಳ್ಳಲಿದೆ. ಆದ್ರೀಗ ಕೇಂದ್ರ ಸರಕಾರ ಜೂನ್ 7ರ ವರೆಗೂ 4ನೇ ಹಂತದ ಲಾಕ್ ಡೌನ್ ಆದೇಶವನ್ನು ಮುಂದುವರಿಸಿದೆ. ಜೂನ್ 8ರಿಂದ 5ನೇ ಹಂತದ ಲಾಕ್ ಡೌನ್ ಆದೇಶ ಜಾರಿಗೆ ಬರಲಿದೆ. ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಪಾಸ್ ಇಲ್ಲದೇ ಪ್ರಯಾಣಿಸಬಹುದಾಗಿದೆ.

ಬಹುತೇಕ ರಾಜ್ಯಗಳಲ್ಲಿ ಈಗಾಗಲೇ ಸಾರಿಗೆ ಸಂಚಾರ ಆರಂಭವಾಗಿದೆ. ಕಾರ್ಖಾನೆ, ಕಚೇರಿಗಳನ್ನು ತೆರೆಯಲು ಈಗಾಗಲೇ ಅವಕಾಶವನ್ನು ಕಲ್ಪಿಸಲಾಗಿದೆ. ಜೂನ್ 8 ರಿಂದ 5ನೇ ಹಂತದ ಲಾಕ್ ಡೌನ್ ಆದೇಶ ಜಾರಿಗೆ ಬರಲಿದ್ದು, ಅಂದಿನಿಂದಲೇ ಕೇಂದ್ರ ಸರಕಾರ ಮೊದಲ ಹಂತದಲ್ಲಿ ಹೋಟೆಲ್, ರೆಸ್ಟೋರೆಂಟ್, ಆಸ್ಪತ್ರೆ, ಶಾಪಿಂಗ್ ಮಾಲ್ ಹಾಗೂ ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳನ್ನು ತೆರೆಯಲು ನಿರ್ಧರಿಸಿದೆ.

ಇನ್ನು ಎರಡನೇ ಹಂತದಲ್ಲಿ ಅಂದ್ರೆ ಜುಲೈ ತಿಂಗಳಿನಿಂದ ಶಾಲೆ, ಕಾಲೇಜು, ಶೈಕ್ಷಣಿಕ ಸಂಸ್ಥೆಗಳು, ಕೋಚಿಂಗ್ ಸೆಂಟರ್ ಸೇರಿದಂತೆ ಎಲ್ಲಾ ರೀತಿಯ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಶಾಲೆ, ಕಾಲೇಜುಗಳನ್ನು ತೆರೆಯುವ ಕುರಿತು ಆಯಾಯ ರಾಜ್ಯ ಸರಕಾರಗಳಿಗೆ ಅನುಮತಿಯನ್ನು ನೀಡಲಾಗಿದೆ.

ಮೂರನೇ ಹಂತದಲ್ಲಿ ಅಂತರಾಷ್ಟ್ರೀಯ ವಿಮಾನ ಸೇವೆ. ಮೆಟ್ರೋ ರೈಲು ಸಂಚಾರ, ಸಿನಿಮಾ ಮಂದಿರಗಳು, ಜಿಮ್ , ಸ್ವಿಮ್ಮಿಂಗ್ ಪೂಲ್, ಮನರಂಜನಾ ಪಾರ್ಕ್, ಬಾರ್, ಆಡಿಟೋರಿಯಂ, ಸಭೆ ಸಮಾರಂಭ, ಸಾಮಾಜಿಕ, ಧಾರ್ಮಿಕ, ಕ್ರೀಡೆ, ಮನೋರಂಜನೆ, ಸಾಂಸ್ಕೃತಿಕ ಸಮಾರಂಭಗಳಿಗೆ ಅವಕಾಶವನ್ನು ಕಲ್ಪಿಸಲು ಕೇಂದ್ರ ಸರಕಾರ ಪ್ಲ್ಯಾನ್ ರೂಪಿಸಿದೆ.

ಲಾಕ್ ಡೌನ್ ಅವಧಿಯಲ್ಲಿ 60 ವರ್ಷ ಮೇಲ್ಪಟ್ಟರು, ಗರ್ಭಿಣಿಯರು ಹಾಗೂ 10 ವರ್ಷದೊಳಗಿನ ಮಕ್ಕಳು ಮನೆಯಿಂದ ಹೊರಬರದಂತೆ ನಿಷೇಧ ಹೇರಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

Leave A Reply

Your email address will not be published.