ಬೆಂಗಳೂರು : ಕೊರೋನಾ ವೈರಸ್ ಸೋಂಕಿನ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಎಡವಿದೆ. ರಾಜ್ಯದಲ್ಲಿ ಜನರಿಗೆ ಸರಿಯಾದ ರೀತಿಯಲ್ಲಿ ಆರೋಗ್ಯ ಸೌಲಭ್ಯ ಸಿಗುವುದಿಲ್ಲವೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ರಾಜ್ಯ ಸರಕಾರವನ್ನು ಪ್ರಶ್ನಿಸಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜಾರಿಯಾದ ಲಾಕ್ ಡೌನ್ ಸಮಯದಲ್ಲಿ ಸೇವೆ ಸಲ್ಲಿಸುವ ಸರ್ಕಾರಿ ನೌಕರರಿಗೆ ಏನೆಲ್ಲಾ ಸೌಲಭ್ಯ ನೀಡಿದೆ. ಬಿಬಿಎಂಪಿ ಸಿಬ್ಬಂದಿ, ನ್ಯಾಯಾಲಯ, ಪೊಲೀಸ್ ಮತ್ತು ಬೇರೆ ಇಲಾಖೆಗಳ ಎಲ್ಲಾ ಸರ್ಕಾರಿ ನೌಕರರಿಗೆ ಕೊರೋನಾ ಪರೀಕ್ಷೆ ಮಾಡಿಸಲು ಸರ್ಕಾರ ಪ್ರತ್ಯೇಕ ಸೌಲಭ್ಯ ಒದಗಿಸಿದೆಯೇ ಎಂದು ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮಕ್ಕು ಅಲೋಕ್ ಅರಡೆ ಅವರನ್ನೊಳಗೊಂಡ ವಿಭಾಗೀಯ ಪೀಠ ಪ್ರಶ್ನಿಸಿದೆ.

ಖಾಸಗಿ ಆಂಬ್ಯುಲೆನ್ಸ್‌ಗಳಿಗೂ ಸಹಾಯವಾಣಿ ಇದೆಯೆ? ಬಿಯು ಕೋಡ್ ಇಲ್ಲದಿದ್ದರೂ ಆಸ್ಪತ್ರೆಗೆ ದಾಖಲಿಸುತ್ತೀರಾ? ಪಾಸಿಟಿವ್ ಬಂದಾಗ ಖಾಸಗಿ ಆಸ್ಪತ್ರೆಗೆ ದಾಖಲಾಗುವುದು ಹೇಗೆ? ಸೋಂಕಿತರನ್ನು ದಾಖಲಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳಿಗಿರುವ ಮಾರ್ಗಸೂಚಿ ಏನು? ಸೋಂಕು ಉಲ್ಬಣಿಸಿದಾಗ ಐಸಿಯುಗೆ ದಾಖಲಿಸಲು ಕ್ರಮವೇನು? ಚಿಕಿತ್ಸೆಗೆ ಅಗತ್ಯ ಸಂಖ್ಯೆಯ ವೈದ್ಯರು ಲಭ್ಯವಿದ್ದಾರಾ ಎಂದು ಪ್ರಶ್ನಿಸಿತು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಗತ್ಯವಾದ ನರ್ಸ್ ಮತ್ತು ವೈದ್ಯರಿದ್ದಾರೆಯೇ ಎಂದು ಪ್ರಶ್ನಿಸಿದ ನ್ಯಾಯಪೀಠ ಮುಖ್ಯವಾಗಿ ಸೋಂಕು ದೃಢಪಟ್ಟ ವ್ಯಕ್ತಿಯ ಕೈಗೆ ವರದಿ ನೀಡಲ್ಲ, ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದಾದರೆ ಆ ಎಸ್‌ಎಂಎಸ್ ಆಧರಿಸಿ ಖಾಸಗಿ ಆಸ್ಪತ್ರೆಗಳು ಸೋಂಕಿತನನ್ನು ದಾಖಲಿಸಿಕೊಳ್ಳುತ್ತಿವೆಯೆ? ಅದಕ್ಕಿರುವ ಮಾನದಂಡವೇನು? ಖಾಸಗಿ ಆಸ್ಪತ್ರೆಗಳು ಪೇಶೆಂಟ್ ಕೋಡ್ ತಯಾರಿಸಬಹುದೆ? ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ಸೋಂಕಿತನಿಗೆ ಐಸಿಯು, ವೆಂಟೆಲಿಟರ್, ಹಾಸಿಗೆಯ ಅವಶ್ಯಕತೆಯಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದಿದ್ದರೆ ಅದನ್ನು ಒದಗಿಸುವ ಯಾವ ವ್ಯವಸ್ಥೆ ಇದೆ ಎಂದು ಪ್ರಶ್ನಿಸಿದೆ.

ಇನ್ನು ರಾಜ್ಯದಲ್ಲಿ 108 ಆಂಬ್ಯುಲೆನ್ಸ್ ಎಷ್ಟಿವೆ, ಅವುಗಳ ನಿರ್ವಹಣೆ ಮತ್ತು ಲಭ್ಯತೆ ಹೇಗಿದೆ ? ಬೆಸ್ಕಾಂ 1912 ಹೆಲ್ಪ್‌ಲೈನ್ ಅನ್ನು ಕೋವಿಡ್-19 ಸಹಾಯವಾಣಿಯನ್ನಾಗಿ ಏಕೆ ಬಳಸಿಕೊಳ್ಳಲಾಗುತ್ತಿದೆ? ಮಳೆಗಾಲದಲ್ಲಿ 1912ಕ್ಕೆ ದಿನಕ್ಕೆ ಸರಾಸರಿ 25 ಸಾವಿರ ಕರೆಗಳು ಬರುತ್ತವೆ ಎಂದು ವಕೀಲರು ಹೇಳುತ್ತಾರೆ. ಹಾಗಾದರೆ, ಇದನ್ನು ಹೇಗೆ ನಿಭಾಯಿಸಲಾಗುತ್ತದೆ ಎಂಬ ಬಗ್ಗೆ ವಿವರಣೆ ನೀಡುವಂತೆ ನ್ಯಾಯಪೀಠ ನಿರ್ದೇಶಿಸಿದೆ. ಈ ಕುರಿತು ವಿಚಾರಣೆಯನ್ನು ಹೈಕೋರ್ಟ್ ಗುರುವಾರಕ್ಕೆ ಮುಂದೂಡಿದ್ದು, ರಾಜ್ಯ ಸರಕಾರ ಹೈಕೋರ್ಟ್ ನೀಡಿರುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ.