ಉಡುಪಿಯಲ್ಲಿ ವಧುವಿಗೆ ಕರೊನಾ ಸೋಂಕು : ಮದುವೆಗೆ ಬಂದಿದ್ದ 7 ಜನರಿಗೂ ಪಾಸಿಟಿವ್ ​!

0

ಉಡುಪಿ : ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿದೆ. ಅದ್ರಲ್ಲೂ ಮದುವೆ, ಮೆಹಂದಿ ಕಾರ್ಯಕ್ರಮಗಳೇ ಕೊರೊನಾ ಹಾಟ್ ಸ್ಪಾಟ್ ಆಗಿ ಮಾರ್ಪಡುತ್ತಿವೆ. ಅಂತೆಯೇ ಉಡುಪಿಯಲ್ಲಿ ನವವಧು ಸೇರಿದಂತೆ ಮದುವೆಗೆ ಬಂದಿದ್ದ 7 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರಿನ ಕೊಂಬಗುಡ್ಡೆಯ ಯುವತಿಯ ವಿವಾಹವು ಶಿವಮೊಗ್ಗ ಜಿಲ್ಲೆಯ ಹೊಸನಗರದ ಯುವಕನೊಂದಿಗೆ ಜೂ.25ರಂದು ನೆರವೇರಿತ್ತು. ವಧುವಿನ ಮನೆಯಲ್ಲಿ ಅದ್ದೂರಿಯಾಗಿ ಮೆಹಂದಿ ಕಾರ್ಯಕ್ರಮವನ್ನು ನೆರವೇರಿಸಲಾಗಿತ್ತು. ಅಲ್ಲದೇ ಹುಡುಗನ ಮನೆಯಲ್ಲಿ ನಡೆದ ಮದುವೆಯ ಸಮಾರಂಭದಲ್ಲಿಯೂ ನೂರಾರು ಮಂದಿ ಪಾಲ್ಗೊಂಡಿದ್ದರು. ಆದರೆ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೀಗ ಕೇವಲ 10 ದಿನಗಳಲ್ಲಿ ಕೊರೊನಾ ಶಾಕ್ ಕೊಟ್ಟಿದೆ. ನವ ವಧುವಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮೆಹಂದಿ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದ ಸುಮಾರು 7 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಜುಲೈ 6ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ವಧುವನ್ನು ತಪಾಸಣೆಗೆ ಒಳಪಡಿಸಿದಾಗ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೆಹಂದಿ ಶಾಸ್ತ್ರದಲ್ಲಿ ಪಾಲ್ಗೊಂಡ ಕೆಲವರನ್ನು ತಪಾಸಣೆಗೆ ಒಳಪಡಿಸಿದಾಗ 7 ಮಂದಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಈ ಪೈಕಿ ಮೂವರು ಮಕ್ಕಳು, ಮೂವರು ಮಹಿಳೆಯರು, ಒಬ್ಬ ಪುರುಷನಿಗೆ ಕರೊನಾ ಪಾಸಿಟಿವ್​ ದೃಢಪಟ್ಟಿದೆ. ಉಳಿದಂತೆ ಕೊರೊನಾ ತಪಾಸಣೆಯನ್ನು ನಡೆಸಿದ ಇನ್ನೂ ಮೂವರ ವರದಿ ಇನ್ನಷ್ಟೇ ಬರಬೇಕಾಗಿದೆ.

ಇದೀಗ ಮದುವೆಯಲ್ಲಿ ಪಾಲ್ಗೊಂಡಿದ್ದವರಿಗೆ ನಡುಕ ಶುರುವಾಗಿದೆ. ಆರೋಗ್ಯಾಧಿಕಾರಿಗಳು ವಧುವಿನ ಮನೆಯನ್ನು ಸೀಲ್ ಡೌನ್ ಮಾಡಿದ್ದು, ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತಿದ್ದಾರೆ.

Leave A Reply

Your email address will not be published.