ಮಂಗಳೂರು : ಕೊರೊನಾ ಮಹಾಮಾರಿ ಅಟ್ಟಹಾಸವನ್ನು ಮೆರೆಯುತ್ತಿದೆ. ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಕರಾವಳಿ ಭಾಗದಲ್ಲಿ ಕೊರೊನಾ ಸೋಂಕು ಇದುವರೆಗೂ ಪತ್ತೆಯಾಗಿಲ್ಲ. ಆದರೆ ನೆರೆಯ ಕೇರಳದಲ್ಲಿ ಹೆಚ್ಚುತ್ತಿರೋ ಕೊರೊನಾ ಸೋಂಕು ಕರ್ನಾಟಕ ಕರಾವಳಿಗೂ ವ್ಯಾಪಿಸೋ ಆತಂಕ ಎದುರಾಗಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು ದೇವರನಾಡು ಅಂತಾನೇ ಕರೆಯಿಸಿಕೊಳ್ಳೋ ಕೇರಳದಲ್ಲಿ. ಕೇರಳ ರಾಜ್ಯದ ಅತೀ ಹೆಚ್ಚು ಮಂದಿ ವಿದೇಶಗಳಲ್ಲಿಯೇ ನೆಲೆಸಿದ್ದಾರೆ. ಅದ್ರಲ್ಲೂ ಕೇರಳ ರಾಜ್ಯದಲ್ಲಿ ಒಟ್ಟು 20 ಮಂದಿಗೆ ಕೊರೊನಾ ಇರೋದು ದೃಢಪಟ್ಟಿದೆ. ಮಾತ್ರವಲ್ಲ ಕೊರೊನಾ ಶಂಕಿತರ ಸಂಖ್ಯೆಯೂ ಹೆಚ್ಚುತ್ತಲೇ ಇದೆ.

ಆದ್ರೀಗ ಕೇರಳ ರಾಜ್ಯದಲ್ಲಿ ಹೆಚ್ಚುತ್ತಿರೋ ಕೊರೊನಾ ಕರ್ನಾಟಕಕ್ಕೂ ವ್ಯಾಪಿಸೋ ಸಾಧ್ಯತೆಯಿದೆ. ಕೇರಳಿಗರು ಹೆಚ್ಚಾಗಿ ಮಂಗಳೂರನ್ನೇ ಆಶ್ರಯಿಸಿಕೊಂಡಿದ್ದಾರೆ. ನಿತ್ಯವೂ ಕೇರಳ ಹಾಗೂ ಮಂಗಳೂರಿನ ನಡುವೆ ನೂರಕ್ಕೂ ಅಧಿಕ ಬಸ್ಸುಗಳು ಸಂಚರಿಸುತ್ತಿವೆ. ಮಂಗಳೂರಿನ ಕಾಲೇಜುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೇರಳದ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.

ಅಲ್ಲದೇ ಮಂಗಳೂರಿನ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸೋ ಸಿಬ್ಬಂಧಿಗಳಿಂದ ಹಿಡಿದು ರೋಗಿಗಳು ಕೂಡ ಕೇರಳಿಗರೇ ಆಗಿದ್ದಾರೆ. ಆದರೆ ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ವ್ಯಾಪಿಸುತ್ತಿದ್ದರೂ ಕೂಡ ರಾಜ್ಯ ಸರಕಾರವಾಗಲಿ, ಜಿಲ್ಲಾಡಳಿತವಾಗಲಿ ಈ ಬಗ್ಗೆ ಕ್ರಮಕೈಗೊಂಡಿಲ್ಲ.

ಇದೀಗ ಕಾಲೇಜುಗಳಿಗೆ ರಜೆ ಘೋಷಿಸಿರೊ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮೂರಿಗೆ ತೆರಳಿದ್ದಾರೆ. ಸಾಲದಕ್ಕೆ ನಿತ್ಯವೂ ಮಂಗಳೂರು ವಿಮಾನ ನಿಲ್ದಾಣದ ಮೂಲಕವೂ ಕೇರಳಿಗರು ಸ್ವದೇಶಕ್ಕೆ ಆಗಮಿಸುವುದರ ಜೊತೆಗೆ ವಿದೇಶಕ್ಕೂ ತೆರಳುತ್ತಿದ್ದಾರೆ. ಮಂಗಳೂರಿನ ವಿಮಾನ ನಿಲ್ದಾಣ, ಬಂದರಿನಲ್ಲಿ ಸ್ಕ್ರೀನಿಂಗ್ ಅಳವಡಿಸಿರೋ ಜಿಲ್ಲಾಡಳಿತ ಜಿಲ್ಲೆಯೊಳಗೆ ಪ್ರವೇಶಿಸಿರುವವರ ವಿರುದ್ದ ನಿಗಾ ಇರಿಸಿಲ್ಲ.

ಕೇರಳ ರಾಜ್ಯಕ್ಕೆ ನಿತ್ಯವೂ ವಿದೇಶಗಳಲ್ಲಿ ನೆಲೆಸಿರುವವರು ಆಗಮಿಸುತ್ತಿದ್ದಾರೆ. ವಾರದ ಹಿಂದೆಯಷ್ಟೇ ಇಟಲಿಯಿಂದ ಬಂದಿದ್ದ ಕೇರಳ ಕುಟುಂಬವೊಂದಕ್ಕೆ ಕೊರೊನಾ ಇರೋದು ದೃಢಪಟ್ಟಿದೆ. ಆ ಕುಟುಂಬ ಜ್ವರ ಕಾಣಿಸಿಕೊಂಡಿದ್ದಾಗಲೂ ವೈದ್ಯರ ಬಳಿಯಲ್ಲಿ ಇಟಲಿಯಿಂದ ಬಂದಿರೋ ವಿಚಾರವನ್ನು ಬಹಿರಂಗ ಪಡಿಸಿರಲಿಲ್ಲ.

ಅಲ್ಲದೇ ಕೊರೊನಾ ಪೀಡಿತ ಕುಟುಂಬ ಸದಸ್ಯರು ಕೇರಳದ ಮಾಲ್, ಸಿನಿಮಾ ಥಿಯೇಟರ್ ಸೇರಿದಂತೆ ಹಲವು ಕಡೆ ಸುತ್ತಿದ್ದಾರೆ. ಆದ್ರೀಗ ಕುಟುಂಬಕ್ಕೆ ಕೊರೊನಾ ಇರೋದು ದೃಢಪಟ್ಟಿರೋ ಹಿನ್ನೆಲೆಯಲ್ಲಿ ಕೇರಳಿಗರಿಗೆ ಆತಂಕ ಶುರುವಾಗಿದೆ.

ಈ ಹಿನ್ನೆಲೆಯಲ್ಲಿ ಕೇರಳ ಸರಕಾರ ತನ್ನ ರಾಜ್ಯವನ್ನು ಪ್ರವೇಶಿಸೋ ಪ್ರತಿಯೊಬ್ಬರ ಮೇಲೂ ನಿಗಾ ಇರಿಸೋದಕ್ಕೆ ಮುಂದಾಗಿದೆ. ಗಡಿ ಭಾಗದಲ್ಲಿ ಸ್ಕ್ರೀನಿಂಗ್ ಅಳವಡಿಸೋ ಮೂಲಕ ಕೊರೊನಾ ಸೋಂಕು ವ್ಯಾಪಿಸದಂತೆ ಮುನ್ನೆಚ್ಚರಿಕೆಯನ್ನು ಕೈಗೊಳ್ಳುತ್ತಿದೆ. ಅಂತೆಯೇ ದಕ್ಷಿಣ ಕನ್ಡಡ ಜಿಲ್ಲಾಡಳಿತ ಕೂಡ ರಾಜ್ಯದ ಗಡಿಯೊಳಗೆ ಪ್ರವೇಶಿಸೋ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಬೇಕಿದೆ.

ಹೀಗಾಗಿ ಕೇರಳ ಕರ್ನಾಟಕ ಗಡಿ ಭಾಗದಲ್ಲಿ ಸ್ಕ್ರೀನಿಂಗ್ ಅಳವಡಿಸೋದು ಅತೀ ಅಗತ್ಯ. ಒಂದೊಮ್ಮೆ ಕೇರಳ ಗಡಿಯಿಂದ ರಾಜ್ಯದೊಳಗೆ ಪ್ರವೇಶಿಸುವವರ ವಿರುದ್ದ ಹದ್ದಿನ ಕಣ್ಣು ಇರಿಸದೇ ಇದ್ದಲ್ಲಿ ಬಾರೀ ಗಂಡಾಂತರ ಎದುರಾಗೋದು ಗ್ಯಾರಂಟಿ.

ಮೈಸೂರು, ಮಡಿಕೇರಿಗೂ ಕಂಟಕ !
ಕೇವಲ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗಷ್ಟೇ ಅಲ್ಲಾ ಕೇರಳದ ಮೈಸೂರು, ಮಡಿಕೇರಿಯೊಂದಿಗೂ ತನ್ನ ಗಡಿಯನ್ನು ಹಂಚಿಕೊಂಡಿದೆ. ಹೀಗಾಗಿ ಮಡಿಕೇರಿಯ ಕರಿಕೆ ಹಾಗೂ ಚಾಮರಾಜನಗರದ ಮೂಲಕ ಕೇರಳಿಗರು ಕರ್ನಾಟಕಕ್ಕೆ ಬರುತ್ತಿದ್ದಾರೆ.

ಇದರಿಂದಾಗಿ ರಾಜ್ಯಕ್ಕೆ ಕೇರಳದಿಂದಲೂ ಕೊರೊನಾ ಹರಡುವ ಭೀತಿ ಎದುರಾಗಿದೆ. ಕೇರಳ ರಾಜ್ಯ ಈಗಾಗಲೇ ಮುನ್ನೆಚ್ಚರಿಕೆಯ ಅಗತ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಕರ್ನಾಟಕ ರಾಜ್ಯ ಕೇರಳಿಗರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.